ಮೈಸೂರು: ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯರ ವಿರುದ್ಧ ನೀಡಿದ್ದ ಹೇಳಿಕೆ ಕುರಿತಂತೆ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಿವಾದವೇನು: ಸಾತನೂರಿನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ, "ಟಿಪ್ಪು ಸುಲ್ತಾನ್ ಅವರನ್ನು ಮಂಡ್ಯದ ಉರಿಗೌಡ ಮತ್ತು ನಂಜೇಗೌಡ ಕೊಂದು ಹಾಕಿದ ಮಾದರಿಯಲ್ಲಿಯೇ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ" ಎಂದು ಹೇಳಿದ್ದರು. ಕಳೆದ ಫೆಬ್ರವರಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಕೂಡಲೇ ಕ್ರಮವಹಿಸಬೇಕೆಂದು ಒತ್ತಾಯಿಸಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮನವಿ ಸಲ್ಲಿಸಿದ್ದನ್ನು ಪರಿಗಣಿಸಿ ದೇವರಾಜ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಶ್ವಥ್ ನಾರಾಯಣ್ ಅವರ ವಿವಾದಿತ ಹೇಳಿಕೆಯಿಂದ ರಾಜ್ಯಾದ್ಯಂತ ಕೋಮು ಸೌಹಾರ್ದತೆಗೆ ಧಕ್ಕೆಯಾಗಿದೆ. ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಅವರ ಕೊಲೆ ಬೆದರಿಕೆ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ದೂರಿನನ್ವಯ ದೇವರಾಜ ಪೋಲಿಸ್ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಐಪಿಸಿ ಸೆಕ್ಷನ್ 506 ಹಾಗೂ 153 ರ ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಯಲಿದೆ.
ಸಾತನೂರು ಗ್ರಾಮದಲ್ಲಿ ಫೆಬ್ರವರಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅಶ್ವಥ್ ನಾರಾಯಣ, "ಟಿಪ್ಪುವಿನ ಜಾಗಕ್ಕೆ ಸಿದ್ದರಾಮಯ್ಯನವರು ಬಂದು ಬಿಡುತ್ತಾರೆ. ನಿಮಗೆ ಸಾವರ್ಕರ್ ಬೇಕಾ, ಟಿಪ್ಪು ಬೇಕಾ? ಎಂಬುದನ್ನು ನೀವೇ ತೀರ್ಮಾನಿಸಿ. ಉರಿಗೌಡ ನಂಜೇಗೌಡ ಅವರು ಟಿಪ್ಪುವಿಗೆ ಏನು ಮಾಡಿದರು ಅನ್ನೋದು ನಿಮಗೆ ಗೊತ್ತಿದೆ. ಅದೇ ರೀತಿ ಇವರನ್ನೂ ಹೊಡೆದು ಹಾಕಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತದಿಂದ ಮಾತ್ರ ಅಭಿವೃದ್ಧಿ ಸಾಧ್ಯ" ಎಂದು ಹೇಳಿದ್ದರು.
ಅಶ್ವಥ್ ನಾರಾಯಣ ವಿರುದ್ಧ ಗರಂ ಆಗಿದ್ದರು ಸಿದ್ದರಾಮಯ್ಯ : ಅಶ್ವತ್ಥ್ ನಾರಾಯಣ್ ಅವರ ವಿವಾದಾತ್ಮಕ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ ದಿನವೇ ಸರಣಿ ಟ್ವೀಟ್ ಮಾಡಿ, ಅಶ್ವತ್ಥ್ ನಾರಾಯಣ ಅವರು ಮಾನಸಿಕ ಅಸ್ವಸ್ಥರ ರೀತಿ ಹೇಳಿಕೆ ನೀಡಿದ್ದಾರೆ. ತಕ್ಷಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ, ಪೊಲೀಸರು ಬಂಧಿಸಬೇಕು. ಇಲ್ಲದಿದ್ದರೆ ಅಶ್ವತ್ಥ ನಾರಾಯಣ್ ಮಾನಸಿಕ ಅಸ್ವಸ್ಥರೇ ಎಂಬುದನ್ನು ಭಾರತೀಯ ಜನತಾ ಪಕ್ಷ ಒಪ್ಪಿಕೊಂಡಂತಾಗುತ್ತದೆ ಎಂದು ಹೇಳಿದ್ದರು. ಇದರ ಜೊತೆಗೆ ಇವರ ವಿರುದ್ಧ ಪೊಲೀಸರು ಸರಿಯಾಗಿ ಕ್ರಮ ಕೈಗೊಳ್ಳಬೇಕು. ನನ್ನ ಹತ್ಯೆಗೆ ಪ್ರಚೋದಿಸಿದವರನ್ನು ಹುಡುಕಲು ಕಷ್ಟವೇನಿಲ್ಲ. ಆತ ಪ್ರಧಾನಿ ಪಕ್ಕದಲ್ಲಿಯೇ ಇದ್ದಾರೆ. ಹೀಗಿದ್ದೂ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.
ಇದೀಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಈ ಹೇಳಿಕೆಯ ವಿಚಾರ ಮತ್ತೆ ಸುದ್ದಿಯಲ್ಲಿದ್ದು ಅಶ್ವಥ್ ನಾರಾಯಣ್ ವಿರುದ್ಧ ಕಾಂಗ್ರೆಸ್ ಮುಖಂಡರು ನೀಡಿದ ದೂರಿನನ್ವಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಸಿಎಂ, ಡಿಸಿಎಂ: ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ