ಮೈಸೂರು: ಜಾತಿ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಆರು ಮಂದಿ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಎಚ್.ಡಿ. ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದಲ್ಲಿ ಸೋಮವಾರ ರಾತ್ರಿ ಜಾತಿ ವಿಚಾರವಾಗಿ ಘರ್ಷಣೆ ನಡೆದಿದೆ. ಎರಡು ಸಮುದಾಯದ ನಡುವೆ ಕೆಲವು ದಿನಗಳ ಹಿಂದೆಯೇ ಜಗಳ ನಡೆದಿತ್ತು. ಬಳಿಕ ಊರಿನ ಹಿರಿಯರು ಸೇರಿ ಎರಡೂ ಸಮುದಾಯದ ಮುಖಂಡರನ್ನು ಕರೆಸಿ ಒಟ್ಟಿಗೆ ಕೂರಿಸಿ ಪರಸ್ಪರ ಮಾತುಕತೆ ನಡೆಸಿ ಸಂಧಾನ ಮಾಡಿದ್ದರು. ಆದ್ರೆ ಸೋಮವಾರ ರಾತ್ರಿ ಒಂದು ಸಮುದಾಯಕ್ಕೆ ಸೇರಿದ ಸುರೇಶ್ ಎಂಬುವರು ಅಂಗಡಿಯಿಂದ ಸಾಮಾನುಗಳನ್ನು ಖರೀದಿಸಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಮತ್ತೊಂದು ಸಮುದಾಯದ ಸುಮಾರು 20 ಜನರ ಗುಂಪು ಕಲ್ಲುಗಳಿಂದ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಅದೇ ಸಮುದಾಯಕ್ಕೆ ಸೇರಿದ ಮನೆಗಳೊಳಗೆ ಪ್ರವೇಶಿಸಿ ಕಲ್ಲು ತೂರಾಟ ನಡೆಸಿ, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ. ಈ ಘಟನೆಯಲ್ಲಿ ಸುರೇಶ, ಅಶೋಕ, ಮೂರ್ತಿ, ಶಿವರಾಜು, ನಿಂಗರಾಜು, ಅಪ್ಪಾಜಿ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಒಟ್ಟು ಆರು ಮಂದಿ ಗಾಯಗೊಂಡಿದ್ದು ಮೂವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಹೆಚ್. ಡಿ. ಕೋಟೆಯ ಸಾರ್ವಜನಿಕ ಆಸ್ಪತ್ರೆ ಹಾಗು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಎಚ್.ಡಿ. ಕೋಟೆ ಪೊಲೀಸರು ರಾತ್ರಿ ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.