ಮೈಸೂರು: ''ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಜನರಿಗೆ ಅಕ್ಕಿ ವಿತರಣೆ ಮಾಡಲು ಸಿದ್ದರಾಮಯ್ಯನವರು ಈಗಾಗಲೇ ಕೇಂದ್ರದ ಜೊತೆಗೆ ಮಾತನಾಡಿದ್ದಾರೆ. ವಿತರಣೆಯಲ್ಲಿ ಒಂದೆರೆಡು ತಿಂಗಳು ತಡವಾದರೆ ಅಂತಹ ತೊಂದರೆ ಏನೂ ಆಗುವುದಿಲ್ಲ'' ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಹೇಳಿದರು. ಮೈಸೂರಿನ ವಿಶ್ವವಿದ್ಯಾಲಯದಲ್ಲಿಂದು ಅವರು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿರು.
''ಉಚಿತ ಅಕ್ಕಿ ನೀಡುವುದನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ನಮಗೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡಲು ಪರ್ಯಾಯ ಮಾರ್ಗಗಳಿವೆ. ಆದರೂ ಮುಖ್ಯಮಂತ್ರಿಗಳು ಕೇಂದ್ರದ ಜೊತೆ ಮಾತನಾಡಿದ್ದಾರೆ. ಅಕ್ಕಿ ಬದಲಾಗಿ ಪರ್ಯಾಯವಾಗಿ ಬೇರೆ ಆಹಾರ ಧಾನ್ಯಗಳನ್ನು ನೀಡಲು ಮಾರ್ಗವಿದೆ ಎಂದು ಆಹಾರ ಸಚಿವರು ಹೇಳಿದ್ದಾರೆ. ಬೇರೆ ಬೇರೆ ಆಹಾರ ಪದಾರ್ಥಗಳನ್ನು ನೀಡಬಹುದು. 5 ಕೆಜಿ ಅಕ್ಕಿಯನ್ನು ಈಗಾಗಲೇ ನೀಡುತ್ತಿದ್ದೇವೆ. ಪೂರ್ಣ ಪ್ರಮಾಣದಲ್ಲಿ ಅಕ್ಕಿ ಕೊಡಲು ತಡವಾದರೆ ಅಂತಃ ತೊಂದರೆ ಏನೂ ಆಗದು'' ಎಂದು ತಿಳಿಸಿದರು.
''ಈಗಾಗಲೇ ಉಚಿತ ವಿದ್ಯುತ್, ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಗೃಹ ಲಕ್ಷ್ಮಿ ಯೋಜನೆಗೆ ಆಗಸ್ಟ್ 15ರವರೆಗೆ ಸಮಯಾವಕಾಶವಿದೆ. ಈ ಮೂರು ಪ್ರಮುಖ ಯೋಜನೆಗಳು ಜಾರಿಯಾಗಿದ್ದು, ಯಾವುದೇ ತೊಂದರೆಗಳು ಇಲ್ಲ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈಸೂರು- ಬೆಂಗಳೂರು ಟೋಲ್ ದರ ಹೆಚ್ಚಳದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ''ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅದರ ಎಲ್ಲ ರೀತಿಯ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿದೆ. ಟೋಲ್ ದರವನ್ನು ಕೇಂದ್ರ ಸರ್ಕಾರ ನಿಗದಿ ಮಾಡುವಂತದ್ದು. ನಾವು ಮೊದಲ ಹಂತವಾಗಿ ಎಲ್ಲ ಪ್ರಮುಖ ರಸ್ತೆಯ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದೇವೆ. ಹಂತ ಹಂತವಾಗಿ ರಸ್ತೆಗಳನ್ನು ಅಭಿವೃದ್ಧಿ ಮಾಡುವ ಕಾರ್ಯ ಕೈಗೊಳ್ಳಲಾಗುವುದು'' ಎಂದು ಹೇಳಿದರು.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ: ''ಕೇಂದ್ರ ಸರ್ಕಾರ ಅಕ್ಕಿಯನ್ನು ಉಚಿತವಾಗಿ ನೀಡುವ ರೀತಿ ವರ್ತಿಸುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರದವರು ಅದಾನಿ, ಅಂಬಾನಿ ಜೊತೆ ಬೆಳೆದವರು, ಅವರಿಗೆ ಬಡವರ ಕಷ್ಟ ಅರ್ಥವಾಗುತ್ತಿಲ್ಲ'' ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ದಾವಣಗೆರೆ ನಗರದಲ್ಲಿ ನಿನ್ನೆ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''10 ಕೆಜಿ ಅಕ್ಕಿಯನ್ನು ನಾವು ವಿತರಿಸಲು ಸಿದ್ಧರಿದ್ದೇವೆ. ಆದರೆ, ಕೇಂದ್ರ ಸರ್ಕಾರ ಅಸಹಕಾರದ ನೀತಿಯಿಂದ ಅಕ್ಕಿ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಗರಂ ಆಗಿದ್ದರು.
ಇದನ್ನೂ ಓದಿ: ಗುತ್ತಿಗೆದಾರರ ನಿಯೋಗದಿಂದ ಸಿಎಂ ಭೇಟಿ.. ಈಗಿನ ಸಚಿವ, ಶಾಸಕರು ಕಮಿಷನ್ ಕೇಳಿದರೆ ಅದನ್ನೂ ಬಹಿರಂಗ ಪಡಿಸುತ್ತೇವೆ: ಕೆಂಪಣ್ಣ