ಮೈಸೂರು: ಕಾನೂನು ಪ್ರಕಾರ ಭ್ರೂಣ ಹತ್ಯೆ ಅಪರಾಧ, ಅದರಲ್ಲೂ ಹೆಣ್ಣು ಭ್ರೂಣ ಹತ್ಯೆ ದೊಡ್ಡ ಅಪರಾಧ. ಇತ್ತಿಚೆಗೆ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗಿದ್ದು, ಇದನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್ ಸಿ.ಮಹಾದೇವಪ್ಪ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್ ಸಿ.ಮಹಾದೇವಪ್ಪ, ಹೆಣ್ಣು ಭ್ರೂಣ ಹತ್ಯೆ ಕಾನೂನು ಪ್ರಕಾರ ದೊಡ್ಡ ಅಪರಾಧ. ಕಾನೂನಿನ ಚೌಕಟ್ಟಿನಲ್ಲಿ ಅದಕ್ಕೊಂದು ತಂಡ ಇದೆ. ನಿರಂತರವಾಗಿ ಖಾಸಗಿ ಆಸ್ಪತ್ರೆಗಳು, ವೈದ್ಯರ ಮೇಲೆ ನಿಗಾವಹಿಸಿ ವರದಿ ಕೊಡಬೇಕಿತ್ತು. ಆದರೂ ಇತ್ತಿಚೆಗೆ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ.
ಯಾರ್ಯಾರು ತಪ್ಪಿತಸ್ಥರಿದ್ದಾರೋ ಅವರ ಮೇಲೆ ಕ್ರಮ ಆಗಬೇಕು ಎಂದು ಹೇಳಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಡಿಎಚ್ಒ ನೇತೃತ್ವದಲ್ಲಿ ಇರುವ ಕಮಿಟಿ ಆ್ಯಕ್ಟಿವ್ ಮಾಡಿದ್ದೇವೆ. ಜಿಲ್ಲಾದ್ಯಂತ ಪರಿಶೀಲನೆ ಮಾಡಿ ವರದಿ ಕೊಡಲು ಹೇಳಿದ್ದೇವೆ. ಸಮಗ್ರ ವರದಿ ಬಂದ ಮೇಲೆ ಯಾರ್ಯಾರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿಲ್ಲವೋ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಉಸ್ತುವಾರಿ ಸಚಿವ ಮಹಾದೇವಪ್ಪ ಹೇಳಿದರು.
ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಪರ ವಾತಾವರಣವಿದೆ : ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಪರ ವಾತಾವರಣ ಇದೆ. ಒಂದು ರಾಜ್ಯದಲ್ಲಿ ಸ್ಥಳೀಯ ಪಕ್ಷ ಅಧಿಕಾರ ಹಿಡಿಯಬಹುದು. ಎಲ್ಲ ಕಡೆ ತೀವ್ರ ಸ್ಪರ್ಧೆ ಇದ್ದು, ಪಂಚ ರಾಜ್ಯ ಚುನಾವಣೆ ಫಲಿತಾಂಶ ಮುಂದಿನ ಲೋಕಸಭೆಗೆ ದಿಕ್ಸೂಚಿ ಅಲ್ಲ. ಸ್ಥಳೀಯ ವಿಚಾರಗಳು ಬೇರೆ ಇರುತ್ತವೆ ಎಂದು ಸಚಿವ ಮಹಾದೇವಪ್ಪ ಹೇಳಿಕೆ ನೀಡಿದರು.
ಕ್ಯಾಬಿನೆಟ್ ತೀರ್ಮಾನವೇ ಸುಪ್ರೀಂ: ಜಾತಿ ಗಣತಿ ವರದಿ ವಿಚಾರದಲ್ಲಿ ಕ್ಯಾಬಿನೆಟ್ ತೀರ್ಮಾನವೇ ಸುಪ್ರೀಂ. ಅಲ್ಲಿ ಒಪ್ಪಿಗೆ ಆದ ಮೇಲೆ ಯಾರ್ಯಾರ ಮಾತು ಬರಲ್ಲ. ಎಐಸಿಸಿ ರಾಹುಲ್ ಗಾಂಧಿ ಸೇರಿದಂತೆ ಎಲ್ಲರೂ ವರದಿ ಬಿಡುಗಡೆ ಮಾಡುವಂತೆ ಹೇಳಿದ್ದಾರೆ. ಕ್ಯಾಬಿನೆಟ್ನಲ್ಲಿ ಈ ಬಗ್ಗೆ ತೀರ್ಮಾನ ಆಗುತ್ತದೆ. ರಾಹುಲ್ ಗಾಂಧಿ ಪಕ್ಷ ಹಾಗೂ ಕ್ಯಾಬಿನೆಟ್ ಎಲ್ಲರೂ ಜಾತಿ ಗಣತಿಯ ವರದಿಯ ಪರ ಇದ್ದಾರೆ. ಕೆಲವರು ಮಾತ್ರ ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ ಎಂದು ಸಚಿವ ಡಾ.ಎಚ್ ಸಿ.ಮಹಾದೇವಪ್ಪ ಇದೇ ಸಂದರ್ಭದಲ್ಲಿ ಹೇಳಿಕೆ ನೀಡಿದರು.
ಇದನ್ನೂ ಓದಿ: ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬೇಜವಾಬ್ದಾರಿ ಹೇಳಿಕೆ ನೀಡಬಾರದು: ಜಗದೀಶ್ ಶೆಟ್ಟರ್ ಟಾಂಗ್