ಮೈಸೂರು: ಕಾರ್ಖಾನೆಗಾಗಿ ಭೂಮಿಯನ್ನು ನೀಡಿದ ರೈತರು, ಇತ್ತ ಭೂಮಿಯನ್ನು ಕಳೆದುಕೊಂಡು ಕೆಲಸವೂ ಇಲ್ಲದೇ ಪರದಾಡುತ್ತಿದ್ದಾರೆ. ಇದೀಗ ರೈತರು ಉದ್ಯೋಗಕ್ಕಾಗಿ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸುತ್ತಿದ್ದು, 14ನೇ ದಿನಕ್ಕೆ ಕಾಲಿಟ್ಟಿದೆ.
ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದ ಬಳಿಯಿರುವ ಏಷ್ಯನ್ ಪೇಂಟ್ಸ್ ಕಾರ್ಖಾನೆಗೆ ಭೂಮಿ ಕೊಟ್ಟ ರೈತ ಕುಟುಂಬಗಳಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಲಾಗಿತ್ತು. ಇದೀಗ ಕಾರ್ಖಾನೆ ಉದ್ಯೋಗ ನೀಡದೆ ಸತಾಯಿಸುತ್ತಿದೆ ಎಂದು ಭೂಮಿ ಕೊಟ್ಟ ರೈತರ ಆರೋಪಿಸಿದ್ದಾರೆ. ಕುಟುಂಬ ಸಮೇತ ರೈತ ಸಂಘದ ಬೆಂಬಲದೊಂದಿಗೆ ಕಳೆದ 14 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನು ಓದಿ:ಕೋವಿಡ್ ನಡುವೆಯೂ ಕಂದಾಯ ಇಲಾಖೆ ನಿರ್ವಹಣೆಯಲ್ಲಿ ಮೈಸೂರಿಗೆ 2ನೇ ಸ್ಥಾನ
ಈ ಪ್ರತಿಭಟನೆ ಇಂದು 14ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನಾ ಸ್ಥಳದಲ್ಲೇ ಭೂಮಿ ಕಳೆದುಕೊಂಡ ರೈತ ಕುಟುಂಬಗಳು ಅಡುಗೆ ಮಾಡಿಕೊಂಡು ಪ್ರತಿಭಟನೆ ಮಾಡುತ್ತಿವೆ. ಪ್ರತಿಭಟನಾ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಆಗಮಿಸದಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.