ಮೈಸೂರು: ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗಾಗಿದೆ ರೇಷ್ಮೆ ಬೆಳೆಗಾರರ ಪರಿಸ್ಥಿತಿ. ಇದಕ್ಕೆಲ್ಲ ಲಾಕ್‌ಡೌನ್ ಕಾರಣ ಎಂದು ರೈತರು ತಮಗಾದ ಕಷ್ಟ ತೋಡಿಕೊಂಡರು.
ಚಿನ್ನದ ಬೆಳೆ ಎಂದು ಪ್ರಖ್ಯಾತಿಯಾಗಿರುವ ರೇಷ್ಮೆ ಬೆಳೆ, ಕೊರೊನಾ ಪರಿಣಾಮದಿಂದ ತತ್ತರಿಸಿದೆ. ಪಿರಿಯಾಪಟ್ಟಣ ತಾಲೂಕಿನ ಹಿಟ್ನೆಹೆಬ್ಬಾಗಿಲು, ಭುವನಹಳ್ಳಿ, ಕೋಮಲಾಪುರ, ಬೆಕ್ಕೆರೆ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ರೈತರು ಹಿಂದೆಲ್ಲಾ ತಂಬಾಕು ಬೆಳೆ ಬೆಳೆಯುತ್ತಿದ್ದರು. ಆದರೆ, ಈ ಬೆಳೆ ನಿಷೇಧವಾಗಿರುವುದರಿಂದ ಪರ್ಯಾಯವಾಗಿ ಈ ಭಾಗದ ರೈತರು ಮೈಸೂರಿನ ಕೇಂದ್ರೀಯ ರೇಷ್ಮೆ ಸಂಶೋಧನಾ ಕೇಂದ್ರದಿಂದ ರೇಷ್ಮೆ ಮೊಟ್ಟೆಗಳನ್ನು ತಂದು ಅವುಗಳನ್ನು ರೇಷ್ಮೆ ಸೊಪ್ಪು ಹಾಕಿ ಬೆಳೆಸಿದರು.
ಆದರೀಗ ಅವುಗಳನ್ನು ಮಾರಾಟ ಮಾಡಬೇಕು, ಇಲ್ಲದಿದ್ದರೆ ಈಗ ಬಂದಿರುವ ರೇಷ್ಮೆ ಗೂಡು ಹಾಳಾಗುತ್ತದೆ. ಆದ್ದರಿಂದ ಕಷ್ಟಪಟ್ಟು ಸಾಲ ಮಾಡಿ ರೇಷ್ಮೆ ಬೆಳೆ ಬೆಳೆದಿದ್ದು, ಅವುಗಳನ್ನು ಕೊಂಡುಕೊಳ್ಳಲು ಮೈಸೂರಿನ ಕೇಂದ್ರೀಯ ಸಂಶೋಧನಾ ಕೇಂದ್ರದಲ್ಲಿ ಖರೀದಿಗೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಕಷ್ಟ ಆಗುತ್ತದೆ ಎಂದು ರೈತರಾದ ಕೃಷ್ಣೇಗೌಡ, ಬಸವರಾಜೇಗೌಡ ಮತ್ತು ಮಹದೇವ್ ವಿವರಿಸಿದರು.