ಮೈಸೂರು: ಜಿಲ್ಲೆಯಲ್ಲಿ ಮಾನವ-ಕಾಡುಪ್ರಾಣಿಗಳ ಸಂಘರ್ಷ ಮುಂದುವರೆದಿದೆ. ಕಾಡಾನೆ ದಾಳಿಗೆ ರೈತ ಬಲಿಯಾಗಿರುವ ಘಟನೆ ಗುರುವಾರ ಸರಗೂರು ತಾಲೂಕಿನ ನಡಹಾಡಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ. ರೈತ ಚಿಕ್ಕೇಗೌಡ ಮೃತಪಟ್ಟಿದ್ದಾರೆ. ಬೆಳಿಗ್ಗೆ ತಮ್ಮ ಜಮೀನಿನ ತಿಪ್ಪೆಗೆ ಕಸ ಚೆಲ್ಲಲು ಬಂದಿದ್ದಾಗ ಘಟನೆ ನಡೆದಿದೆ. ಸ್ಥಳಕ್ಕೆ ಸರಗೂರು ಠಾಣೆಯ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪದೇ ಪದೇ ಕಾಡು ಪ್ರಾಣಿಗಳ ದಾಳಿಯಿಂದ ಗ್ರಾಮಸ್ಥರು ನಲುಗಿ ಹೋಗಿದ್ದು ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕೇಗೌಡರ ಕುಟುಂಬಕ್ಕೆ ಪರಿಹಾರ ನೀಡುವಂತೆ ಅರಣ್ಯ ಇಲಾಖೆಯನ್ನು ಆಗ್ರಹಿಸಿದರು. ಡಿವೈಎಸ್ಪಿ ಗೋಪಾಲಕೃಷ್ಣ, ಸರ್ಕಲ್ ಇನ್‌ಸ್ಪೆಕ್ಟರ್ ಲಕ್ಷ್ಮೀಕಾಂತ್ ಸ್ಥಳದಲ್ಲಿದ್ದರು.
ಹೆಚ್.ಡಿ.ಕೋಟೆಯಲ್ಲಿ ಕಾಡಾನೆ ದಾಳಿ, ರೈತ ಗಂಭೀರ: ಜಮೀನಿಗೆ ನೀರು ಹಾಯಿಸಲು ಹೋಗಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಹಳೆ ಹೆಗ್ಗುಡಿಲು ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ರೈತ ದಂಡನಾಯಕ ಗಾಯಗೊಂಡವರು. ರೈತನನ್ನು ತಕ್ಷಣ ಹೆಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೊಲಂಬಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು.
ದಾಳಿ ಮಾಡಿದ ಆನೆ ಹಳೆ ಹೆಗ್ಗುಡಿಲು ಗ್ರಾಮದ ಸುತ್ತಮುತ್ತ ಇದೆ. ಈವರೆಗೂ ಅರಣ್ಯ ಇಲಾಖೆಯ ಸಿಬ್ಬಂದಿ ಬಂದು ಸ್ಥಳ ಮಹಜರು ಅಥವಾ ಆನೆ ಓಡಿಸುವ ಕಾರ್ಯ ಮಾಡಿಲ್ಲ. ಆನೆಗಳ ನಿರಂತರ ಉಪಟಳದಿಂದ ಗ್ರಾಮದಲ್ಲಿ ಭಾರಿ ಪ್ರಮಾಣದ ಬೆಳೆ ನಾಶವಾಗುತ್ತಿದೆ. ಆದರೆ ಈಗ ಜನರ ಮೇಲೆ ದಾಳಿ ನಡೆಯುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂಓದಿ: ಕಾಡಾನೆ ದಾಳಿಯಿಂದ ಮೃತಪಟ್ಟ ವೆಂಕಟೇಶ್ ಮನೆಗೆ ಅರಣ್ಯ ಸಚಿವರ ಭೇಟಿ: ವಿಶೇಷ ಪರಿಹಾರ ಸೇರಿ 25 ಲಕ್ಷ ರೂ. ಘೋಷಣೆ