ಮೈಸೂರು: ಸಾಲಬಾಧೆ ತಾಳಲಾರದೆ ಮನನೊಂದ ರೈತನೋರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಾನೂರು ಗ್ರಾಮದಲ್ಲಿ ನಡೆದಿದೆ.
ಕಾನೂರು ಗ್ರಾಮದ ಚಲುವೆ ಗೌಡ (69) ಆತ್ಮಹತ್ಯೆ ಮಾಡಿಕೊಂಡ ರೈತ. ಈತ 5 ಎಕರೆ ಜಮೀನನ್ನು ಹೊಂದಿದ್ದು, ಅದರಲ್ಲಿ ತಂಬಾಕು ಮತ್ತು ಶುಂಠಿ ಬೆಳೆಯುತ್ತಿದ್ದನು. ಇದಕ್ಕಾಗಿ ಪಿರಿಯಾಪಟ್ಟಣದ ಬ್ಯಾಂಕ್ ಆಫ್ ಬರೋಡದಲ್ಲಿ 8 ಲಕ್ಷ ರೂ. ಸಾಲ ಮಾಡಿದ್ದನು. ಇದರ ಜೊತೆಗೆ ಕೈ ಸಾಲ ಕೂಡ ಮಾಡಿದ್ದರು ಎನ್ನಲಾಗುತ್ತಿದೆ.
ಆದರೆ ಬೆಳೆ ವಿಫಲಗೊಂಡ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೆ ಮನನೊಂದು ತಮ್ಮ ಪಂಪ್‌ಸೆಟ್ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇವರ ಒದ್ದಾಟ ನೋಡಿದ ಸ್ಥಳೀಯರು ಕೂಡಲೇ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಸಂಬಂಧ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.