ಮೈಸೂರು: ಟೊಮೆಟೊಗೆ ಈಗ ಚಿನ್ನದ ಬೆಲೆ ಬಂದಿದೆ. ಈ ನಡುವೆ ಜಮೀನಿನಲ್ಲಿ ಬೆಳೆದ ಟೊಮೆಟೊಗೆ ಕಳ್ಳರ ಕಾಟ ಕೂಡಾ ಹೆಚ್ಚಾಗಿದೆ. ಹೀಗಾಗಿ ಬೆಳೆಗಳ ರಕ್ಷಣೆಗೆ ರೈತ ಸಹೋದರರು ತಮ್ಮ ಜಮೀನಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ.
ಹುಣಸೂರು ತಾಲೂಕಿನ ಕುಪ್ಪೆ ಗ್ರಾಮದ ರೈತ ಸಹೋದರರಾದ ನಾಗೇಶ ಮತ್ತು ಕೃಷ್ಣ ಎಂಬುವವರು ತಮ್ಮ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದಾರೆ. ಈಗ ಟೊಮೆಟೊಗೆ ಬೆಲೆ ಹೆಚ್ಚಳವಾದ ಕಾರಣದಿಂದ ಬೆಳೆಯನ್ನು ಕಳ್ಳರಿಂದ ರಕ್ಷಣೆ ಮಾಡಲು ತಮ್ಮ ಜಮೀನಿನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ.
![ಟೊಮೆಟೊ ಬೆಳೆದ ರೈತ ಸಹೋದರರು](https://etvbharatimages.akamaized.net/etvbharat/prod-images/20-07-2023/ka-mys04-20-07-2023-tomatonews-7208092_20072023165434_2007f_1689852274_875.jpg)
ಕಳ್ಳತನ ತಪ್ಪಿಸಲು ಸಿಸಿಟಿವಿ ಅಳವಡಿಕೆ : ರೈತ ಸಹೋದರರು ತಮಗೆ ಇರುವ ಒಟ್ಟು 10 ಎಕರೆ ಜಮೀನಿನಲ್ಲಿ ಮೂರೂವರೆ ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆ ಬೆಳೆದಿದ್ದಾರೆ. ಇತ್ತೀಚಿಗೆ ಟೊಮೆಟೊ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಕಳ್ಳತನವೂ ಹೆಚ್ಚಳವಾಗಿದೆ. ಕೆಲವು ದಿನಗಳ ಹಿಂದೆ ತಮ್ಮ ಜಮೀನಿನಲ್ಲಿ ಟೊಮೆಟೊ ಕಳವು ಮಾಡಲು ಬಂದ ಇಬ್ಬರನ್ನು ಹಿಡಿದ ಸಹೋದರರು ಬಿಳಿಕೆರೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೇ ಮುಂದೆ ಇಂತಹ ಕಳ್ಳರ ಕಾಟವನ್ನು ತಡೆಯುವ ನಿಟ್ಟಿನಲ್ಲಿ ರೈತ ಸಹೋದರರು ತಮ್ಮ ಜಮೀನಿನಲ್ಲಿ ಎರಡು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಅದನ್ನು ತಮ್ಮ ಮೊಬೈಲ್ ಫೋನ್ಗೆ ಕನೆಕ್ಟ್ ಮಾಡಿಕೊಂಡಿದ್ದಾರೆ. ಇದರಿಂದ ಅವರಿಗೆ ತಮ್ಮ ಜಮೀನಿನಲ್ಲಿ ಏನೇ ನಡೆದರೂ ತಿಳಿಯುತ್ತದೆ.
![ಟೊಮೆಟೊ ಬೆಳೆದ ರೈತ ಸಹೋದರರು](https://etvbharatimages.akamaized.net/etvbharat/prod-images/20-07-2023/ka-mys04-20-07-2023-tomatonews-7208092_20072023165434_2007f_1689852274_238.jpg)
ಜಮೀನಿನ ಬಳಿಯೇ ಕೇರಳದ ವ್ಯಾಪಾರಿಗಳಿಗೆ ಟೊಮೆಟೊ ಮಾರಾಟ: ಟೊಮೆಟೊ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಈಗ ಮಾರುಕಟ್ಟೆಯಲ್ಲಿ ಟೊಮೆಟೊ ಬೆಳೆಗೆ ಬೇಡಿಕೆ ಹೆಚ್ಚಾಗಿದೆ. ಕೇರಳ ಮೂಲದ ವ್ಯಾಪಾರಿಗಳು ನೇರವಾಗಿ ಜಮೀನಿನ ಬಳಿ ಬಂದು ಎಪಿಎಂಸಿಯಲ್ಲಿ ನಡೆಯುತ್ತಿರುವ ದರ ನೀಡಿ, ಟೊಮೆಟೊ ಕೊಂಡುಕೊಂಡು ಹೋಗುತ್ತಾರೆ. ಇದರಿಂದ ನಮಗೆ ಆರ್ಥಿಕವಾಗಿ ಲಾಭವಾಗಿದೆ ಎನ್ನುತ್ತಾರೆ ಈ ರೈತ ಸಹೋದರರು.
ಇದನ್ನೂ ಓದಿ: ಟೊಮೆಟೊ ದುಬಾರಿ: ಕಳ್ಳರಿಂದ ತರಕಾರಿ ರಕ್ಷಿಸಲು ಪಾಳಿಯಲ್ಲಿ ಕಾವಲು ಕಾಯುತ್ತಿರುವ ರೈತರು!
ಎಕರೆಗೆ 10 ಸಾವಿರ ಸಸಿಗಳನ್ನು ನಾಟಿ ಮಾಡಿ, ಹನಿ ನೀರಾವರಿ ಪದ್ದತಿ ಮೂಲಕ ಬೇಸಾಯ ಮಾಡಿದ್ದೇವೆ. ಈವರೆಗೆ 15 ಬಾರಿ ಕಟಾವು ಮಾಡಿದ್ದೇವೆ. ಪ್ರತಿ ಕೆಜಿಗೆ ಸರಾಸರಿ 70 ರಿಂದ 75 ರೂಪಾಯಿಯವರೆಗೆ ಮಾರಾಟ ಮಾಡಿದ್ದೇವೆ. ಈವರೆಗೆ ಟೊಮೆಟೊ ಬೆಳೆಯಿಂದ 4 ಲಕ್ಷ ರೂಪಾಯಿ ಸಿಕ್ಕಿದೆ. ಮತ್ತೆ ಆಗಸ್ಟ್ನಲ್ಲಿ ನಾಟಿ ಮಾಡುತ್ತೇವೆ ಎನ್ನುತ್ತಾರೆ ರೈತ ಸಹೋದರರು.
ಕೃಷಿಯಿಂದ ಗಳಿಸಿದ ಲಾಭದಲ್ಲೇ ಟ್ರ್ಯಾಕ್ಟರ್ ಖರೀದಿ: ಈ ಸಹೋದರರು ಯಾವುದೇ ಸೊಸೈಟಿಯ ಸಾಲಕ್ಕೆ ಕೈ ಚಾಚದೇ, ಕೃಷಿಯಿಂದ ಗಳಿಸಿದ ಲಾಭದಲ್ಲೇ ಟ್ರ್ಯಾಕ್ಟರ್ ಖರೀದಿಸಿ, ಪುಟ್ಟಮನೆಯನ್ನೂ ಸಹ ನಿರ್ಮಿಸಿಕೊಂಡಿದ್ದಾರೆ. ಜೊತೆಗೆ 24 ಆಡುಗಳು ಮತ್ತು 12 ಜಾನುವಾರುಗಳನ್ನು ಸಹ ಸಾಕುತ್ತಿದ್ದಾರೆ. ಸಾವಯವ ಮತ್ತು ರಾಸಾಯನಿಕ ಎರಡು ರೀತಿಯಲ್ಲೂ ಸಹ ಕೃಷಿ ಮಾಡಿ ಇತರ ಕೃಷಿಕರಿಗೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ: ಟೊಮೆಟೊಗೆ ಕಳ್ಳರ ಕಾಟ: ಹಗಲು-ರಾತ್ರಿ ದೊಣ್ಣೆ ಹಿಡಿದು ತೋಟ ಕಾಯುತ್ತಿರುವ ದಂಪತಿ