ಮೈಸೂರು: ಒಡಿಶಾ, ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಫಣಿ ಚಂಡಮಾರುತದಿಂದ ಸಂತ್ರಸ್ತರಾಗಿರುವ ಪ್ರದೇಶಗಳಿಗೆ ಮೊದಲ ಕಂತಿನಲ್ಲಿ ಐದು ಟನ್ ಆಹಾರವನ್ನು ಕೇಂದ್ರಿಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (CFTRI) ಕಳುಹಿಸಿಕೊಟ್ಟಿದೆ.
ಗೊಜ್ಜು ಅವಲಕ್ಕಿ, ಅವಲಕ್ಕಿ, ಬಿಸ್ಕತ್, ರಸ್ಕ್, ಉಪ್ಪಿಟ್ಟು ಆಹಾರ ಪದಾರ್ಥಗಳನ್ನು ಈಗಾಗಲೇ ಕಳುಹಿಸಿದ್ದು, ಎರಡನೇ ಹಂತದ ಆಹಾರ ಕಳುಹಿಸಲು ಸಿಎಫ್ ಟಿಆರ್ ಐ ಸಿಬ್ಬಂದಿ ಹಗಲಿರುಳು ದುಡಿಯುತ್ತಿದ್ದಾರೆ.
ಒಡಿಶಾ ಸಂತ್ರಸ್ತರಿಗೆ ಮೊದಲ ಆದ್ಯತೆ ನೀಡಿ ಆಹಾರ ಕಳುಹಿಸಲಾಗಿದ್ದು, ನಂತರ ಪಶ್ಚಿಮ ಬಂಗಾಳ ಹಾಗೂ ಆಂಧ್ರಪ್ರದೇಶಗಳಿಗೆ ಎರಡನೇ ಆದ್ಯತೆ ನೀಡಲಾಗುವುದು.
ಆಹಾರ ಪೊಟ್ಟಣಗಳನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಒಡಿಶಾಗೆ ಕಳುಹಿಸಲಾಗಿದೆ. ಎರಡನೇ ಕಂತಿನಲ್ಲಿ 20 ಟನ್ ಆಹಾರ ಪೊಟ್ಟಣಗಳನ್ನು ಕಳುಹಿಸುವ ಸಿದ್ಧತೆ ನಡೆಯುತ್ತಿದೆ.
ಅವಲಕ್ಕಿ (ಇಂಮ್ಲಿ ಪೋಹ), ಉಪ್ಪಿಟ್ಟು (ರೆಡಿ ಟು ಇಟ್) ಉಪ್ಪಿಟ್ಟು (ರೆಡಿ ಟು ಕುಕ್) ಚಪಾತಿ, ಟೊಮೆಟೊ ಚಟ್ನಿ, ಹೈಪ್ರೋಟಿನ್ ರಸ್ಕ್, ಬಿಸ್ಕತ್ ತಯಾರಿ ಭರ್ಜರಿಯಾಗಿ ನಡೆಯುತ್ತಿದ್ದು, 800 ಮಂದಿ ಆಹಾರ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಈ ಸಂಬಂಧ ಹಿರಿಯ ವಿಜ್ಞಾನಿಗಳಾದ ಸುಬ್ರಹ್ಮಣ್ಯ ಹಾಗೂ ಡಾ.ವೆಂಕಟೇಶ ಮೂರ್ತಿ ಅವರು 'ಈಟಿವಿ ಭಾರತ್' ನೊಂದಿಗೆ ಮಾತನಾಡಿ ವಿವರಣೆ ನೀಡಿದರು.