ಮೈಸೂರು : ತಮಗಾದ ಅನ್ಯಾಯದ ವಿರುದ್ಧ ನ್ಯಾಯ ಕೇಳಿದ್ದಕ್ಕಾಗಿ ಇಡೀ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹೇರಿ, ಮಾನಸಿಕ ಕಿರುಕುಳ ನೀಡುತ್ತಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೊಂತಯ್ಯನಹುಂಡಿಯಲ್ಲಿ ಬೆಳಕಿಗೆ ಬಂದಿದೆ.
ಕೊಂತಯ್ಯನಹುಂಡಿ ಗ್ರಾಮದ ಮುಖಂಡರ ವರ್ತನೆಗೆ ಬೇಸತ್ತಿರುವ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ವರುಣಾ ಕ್ಷೇತ್ರದ ಕೊಂತಯ್ಯನಹುಂಡಿ ಗ್ರಾಮದಲ್ಲಿ ಈ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹೇರಲಾಗಿದೆ. ಗುರುಮಲ್ಲಪ್ಪ, ಪರಶಿವಪ್ಪ ಮತ್ತು ಮಹದೇವಪ್ಪ ಎಂಬ ಮೂವರು ಸಹೋದರರ ಕುಟುಂಬ ಬಹಿಷ್ಕಾರಕ್ಕೆ ಒಳಗಾದವರು.
ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಕೃಷಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿರುವ ಗ್ರಾಮದ ಮುಖಂಡರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇ ಈ ಕುಟುಂಬ ಮಾಡಿರುವ ತಪ್ಪಾಗಿದೆಯಂತೆ. ಇವರು ನೀಡಿರುವ ಕೇಸ್ ವಾಪಸ್ ಪಡೆಯುವಂತೆ ಗ್ರಾಮದ ಮುಖಂಡರು ಒತ್ತಡ ಹೇರಿದ್ದಾರೆ. ಇದನ್ನು ನಿರಾಕರಿಸಿದ ಕುಟುಂಬದ ಮೇಲೆ ಸಾಮಾಜಿಕ ಬಹಿಷ್ಕಾರ ಹೇರಲಾಗಿದೆ.
ಗ್ರಾಮಸ್ಥರು ನೀಡುವ ಕಿರುಕುಳಕ್ಕೆ ಬೇಸತ್ತು ಗ್ರಾಮ ತೊರೆಯಲು ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ. ಕುಟುಂಬದ ಮುಖ್ಯಸ್ಥರು ಹಾಸಿಗೆ ಹಿಡಿದಿದ್ದಾರೆ. ಬಹಿಷ್ಕಾರದಿಂದ ನೊಂದು ಕುಟುಂಬ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನಂಜನಗೂಡಿನ ತಹಶೀಲ್ದಾರ್ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗ್ತಿದೆ.
ಜತೆಗೆ ಗ್ರಾಮದ ಯಾವುದೇ ಅಂಗಡಿಗಳಲ್ಲಿ ಸಾಮಾಗ್ರಿಗಳನ್ನ ನೀಡುತ್ತಿಲ್ಲ. ಡೈರಿಯಲ್ಲಿ ಹಾಲು ಕೊಡುತ್ತಿಲ್ಲ. ಗ್ರಾಮದಲ್ಲಿ ಕುಡಿಯುವ ನೀರು ಬಿಡುತ್ತಿಲ್ಲ. ಜತೆಗೆ ಕುಟುಂಬಸ್ಥರನ್ನು ಮಾತನಾಡಿಸಿದರೆ 3 ಸಾವಿರ ರೂ. ದಂಡ ವಿಧಿಸುವ ತೀರ್ಮಾನ ಕೈಗೊಂಡಿದ್ದಾರೆ ಎಂದು ಬಹಿಷ್ಕಾರದಿಂದ ನೊಂದ ಕುಟುಂಬದಸ್ಥರು ಆರೋಪಿಸಿದ್ದಾರೆ.
ಸಾಮಾಜಿಕ ಬಹಿಷ್ಕಾರದಿಂದ ನೊಂದ ಕುಟುಂಬ ನ್ಯಾಯಕ್ಕಾಗಿ ಸರ್ಕಾರಿ ಕಚೇರಿಗಳಿಗೆ ನಿರಂತರವಾಗಿ ಅಲೆಯುತ್ತಿದ್ದಾರೆ. ಸಂಬಂಧಪಟ್ಟ ದೊಡ್ಡಕೌಲಂದೆ ಪೊಲೀಸರು ಸಹ ಸ್ಪಂದಿಸುತ್ತಿಲ್ಲ. ಸಾಮಾಜಿಕ ಬಹಿಷ್ಕಾರದಿಂದ ಮುಕ್ತಿ ನೀಡದಿದ್ದರೆ, ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸಿದ್ದೇವೆ ಎಂದು ನೊಂದ ಕುಟುಂಬದ ಸದಸ್ಯರು ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ನ್ಯಾಯ ಕೇಳಿದ್ದಕ್ಕೆ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ: 25 ಸಾವಿರ ರೂಪಾಯಿ ದಂಡ