ಮೈಸೂರು: ಕಸ್ಟಮ್ಸ್ ಅಧಿಕಾರಿ ಎಂದು ಹೇಳಿಕೊಂಡು ವಂಚನೆ ಮಾಡುತ್ತಿದ್ದ ಆರೋಪಿಯನ್ನು ನಗರದ ಸಿಇಎನ್ ಠಾಣೆ ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿ ಗೂಗಲ್ನಲ್ಲಿ ನಗರದ ವಿವಿಧ ಶಾಲೆಗಳ ಹೆಸರುಗಳನ್ನು ಸರ್ಚ್ ಮಾಡಿ ಆ ಶಾಲೆಯ ಲ್ಯಾಂಡ್‌ಲೈನ್ ಸಂಖ್ಯೆಗೆ ಕರೆ ಮಾಡಿ, ತಾನೊಬ್ಬ 2011-12 ಹಳೆಯ ವಿದ್ಯಾರ್ಥಿ ಎಂದು ಹೇಳಿ ಆ ಸಾಲಿನ ಶಿಕ್ಷಕರುಗಳ ಮೊಬೈಲ್ ನಂಬರ್‌ಗಳನ್ನು ಪಡೆದುಕೊಳ್ಳುತ್ತಿದ್ದ. ನಂತರ ಕರೆ ಮಾಡಿ, ನಿಮ್ಮ ಹಳೆ ವಿದ್ಯಾರ್ಥಿ ಎಂದು ಹೇಳಿಕೊಂಡು, ತಾನೊಬ್ಬ ಕಸ್ಟಮ್ಸ್ ಆಫೀಸರ್ ಆಗಿ ಕೆಲಸ ಮಾಡುತ್ತಿರುವುದಾಗಿ ಹೇಳಿ ಸೀಜ್ ಮಾಡಲಾದ ಚಿನ್ನವನ್ನು ಕಡಿಮೆ ಬೆಲೆಯಲ್ಲಿ ಕೊಡಿಸಲಾಗುವುದಾಗಿ ನಂಬಿಸುತ್ತಿದ್ದ. ಬಳಿಕ ಅವರಿಂದ ಹಣವನ್ನು ತನ್ನ ಪರಿಚಯವಿರುವ ವ್ಯಕ್ತಿಗಳಿಗೆ ಕಳುಹಿಸುವಂತೆ ಹೇಳಿ ಹಣವನ್ನು ಬೇರೆಯವರ ಖಾತೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ. ಇನ್ನು ಕೆಲವರಿಗೆ ಕಡಿಮೆ ದರದಲ್ಲಿ ಗೃಹೋಪಯೋಗಿ ವಸ್ತುಗಳನ್ನು ಕೊಡಿಸುವುದಾಗಿಯೂ ತಿಳಿಸಿ ವಂಚಿಸಿದ್ದಲ್ಲದೆ, ಆಟೋ ಡ್ರೈವರ್ ಒಬ್ಬರಿಗೆ ಲೋನ್ ಕೊಡಿಸುವುದಾಗಿ ಹೇಳಿ ಹಣ ಪಡೆದು ಮೋಸ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರು ನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಆರೋಪಿಯ ಮೇಲೆ 6 ಪ್ರಕರಣಗಳು ದಾಖಲಾಗಿದ್ದು, ಒಟ್ಟು 7.48,800 ರೂ. ವಂಚಿಸಿದ್ದಾನೆ ಎನ್ನಲಾಗಿದೆ. ಡಿ.12ರಂದು ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಈ ಹಿಂದೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಕೋರಿಯರ್ ಸರ್ವಿಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ಅಮೆಜಾನ್ ಕಂಪನಿಯಲ್ಲಿ ಸ್ಕ್ಯಾನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಸೆರಗಿಗೆ ಕಲ್ಲು ಸಿಕ್ಕಿಸಿ ವೃದ್ಧೆಯ 70 ಗ್ರಾಂ ಚಿನ್ನದ ಸರ ದೋಚಿದ ವಂಚಕ!