ಮೈಸೂರು: ರಾಜ್ಯಮಟ್ಟದ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಸುದರ್ಶನ್ ನೇತೃತ್ವದ ವಿಶೇಷ ತಜ್ಞರ ತಂಡ ಅರಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿತು.
ಕೊರೊನಾ ಅಬ್ಬರದ ನಡುವೆ ದಸರಾ ಮಹೋತ್ಸವವನ್ನು ಸರಳ ಅಥವಾ ಸಾಂಪ್ರದಾಯಿಕವಾಗಿ ಆಚರಿಸಬೇಕೇ ಎನ್ನುವ ಗೊಂದಲ ರಾಜ್ಯ ಸರ್ಕಾರದಲ್ಲಿದೆ. ಹೀಗಾಗಿ ಸೂಕ್ತ ವರದಿ ಆಧರಿಸಿ ಮುಂದಿನ ರೂಪುರೇಷೆ ಸಿದ್ಧಪಡಿಸಲು ಚಿಂತನೆ ನಡೆಸಲಾಗಿದೆ.
ಈ ಹಿನ್ನೆಲೆಯಲ್ಲಿ ತಜ್ಞರ ತಂಡ ಮೊದಲಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಅಲ್ಲಿ ಉದ್ಘಾಟನಾ ಸ್ಥಳವನ್ನು ಪರಿಶೀಲನೆ ನಡೆಸಿತು. ಆ ಬಳಿಕ ಅರಮನೆ ಮುಂಭಾಗ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ಪೂಜಾ ಕಾರ್ಯಕ್ರಮಗಳ ವಿವರವನ್ನು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರಿಂದ ಪಡೆಯಿತು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯಮಟ್ಟದ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಸುದರ್ಶನ್, ಸಾಮಾಜಿಕ ಅಂತರದಲ್ಲಿ ದಸರಾ ಮಹೋತ್ಸವ ನಡೆಸಬಹುದು. ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ನೀಡುತ್ತೇವೆ ಎಂದು ತಿಳಿಸಿದರು.