ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ 107ನೇ ಮನ್ ಕಿ ಬಾತ್ ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ಚಾಮರಾಜನಗರ ಜಿಲ್ಲೆಯ ಉಮ್ಮತ್ತೂರು ಗ್ರಾಮದ ವರ್ಷ ಎಂಬ ಮಹಿಳಾ ಉದ್ಯಮಿ ಹೆಸರನ್ನು ಪ್ರಸ್ತಾಪ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಬಾಳೆ ದಿಂಡಿನಿಂದ ಹಲವಾರು ಕರಕುಶಲ ವಸ್ತುಗಳು ಹಾಗೂ ತಿಂಡಿ ತಿನಿಸುಗಳನ್ನು ತಯಾರು ಮಾಡುವ ಮೂಲಕ ಉದ್ಯಮಿಯಾಗಿರುವ ವರ್ಷ, ತಮ್ಮ ಈ ಸಾಧನೆ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ.
ನಾನು ಉದ್ಯಮಿಯಾಗಲು ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮವೇ ಕಾರಣ ಎಂದು ಮಾತು ಆರಂಭಿಸಿದ ವರ್ಷ, ಅದೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಅವರಿಂದ ಶಹಭಾಷ್ ಗಿರಿ ಪಡೆದಿದ್ದು ಹೆಮ್ಮೆ ಅನಿಸುತ್ತದೆ ಎಂದು ತಮ್ಮ ಸಾಧನಾ ಹಾದಿ ಹಾಗೂ ತಾವು ನಡೆಸಿಕೊಂಡು ಬರುತ್ತಿರುವ ಈ ಉದ್ಯಮ ಬಗ್ಗೆ ಮಾಹಿತಿ ನೀಡಿದರು. ಸ್ವತಃ ಪ್ರಧಾನಿ ಮೋದಿ ತಮ್ಮ ಹೆಸರು ಪ್ರಸ್ತಾಪಿಸಿದ್ದು, ಖುಷಿ ತಂದಿದೆ. ಮನ್ ಕಿ ಬಾತ್ ಕಾರ್ಯಕ್ರಮ ಮತ್ತಷ್ಟು ಕೆಲಸ ಮಾಡಲು ಪ್ರೇರಣೆಯಾಗಿದೆ ಎಂದಿದ್ದಾರೆ.
![ಸ್ಥಳೀಯ ವಸ್ತುಗಳಿಂದ ಸಿದ್ಧಗೊಂಡ ಕರಕುಶಲ ಉತ್ಪನ್ನಗಳು](https://etvbharatimages.akamaized.net/etvbharat/prod-images/06-12-2023/ka-mys05-28-11-2023-mankibathhandicraftphotovideo-7208092_28112023162045_2811f_1701168645_351.jpg)
ಈಟಿವಿ ಭಾರತದ ವಿಶೇಷ ಸಂದರ್ಶನ: ನಾವು ಮೂಲತಃ ರೈತ ಕುಟುಂಬದವರು. ಎಂ. ಟೆಕ್ ಪದವೀಧರೆಯಾಗಿದ್ದು, ಚಾಮರಾಜನಗರ ಜಿಲ್ಲೆಯ ಉಮ್ಮತ್ತೂರು ನಮ್ಮ ಊರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎರಡು ವರ್ಷಗಳ ಹಿಂದೆ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಇಂತಹದ್ದೇ ತಮಿಳುನಾಡಿನ ಉದ್ಯಮಿಯೊಬ್ಬರ ಬಗ್ಗೆ ಪ್ರಸ್ತಾವನೆ ಮಾಡಿದ್ದರು. ಅಂತಹದ್ದೇ ಉದ್ಯಮಕ್ಕೆ ಮುಂದಾಗಬೇಕು ಎಂಬ ಯೋಚನೆ ಬಂದಿತು. ಅಂದುಕೊಂಡಂತೆ ಆಕೃತಿ ಎಕೋ ಫ್ರೆಂಡ್ಲಿಎಂಟರ್ ಪ್ರೈಸಸ್ ಮೂಲಕ ಉದ್ಯಮಕ್ಕೆ ಕಾಲಿಟ್ಟೆವು. ಕಸ ನಮಗಿರುವ ಪ್ರಮುಖ ತೊಂದರೆ ಆಗಿತ್ತು. ಅದನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಎಂಬ ಬಗ್ಗೆ ಪ್ರಯತ್ನ ಮಾಡಿದೆವು.
ನಮಗೆ ಗೊತ್ತಿರುವುದರಿಂದಲೇ ಕೆಲಸ ಆರಂಭಿಸಿದೆ; ಅದರಲ್ಲಿ ಬಾಳೆಹಣ್ಣನ್ನು ಕತ್ತರಿಸಿದ ಮೇಲೆ ಅದರ ದಿಂಡು ಮತ್ತು ಬುಡವನ್ನು ಅನುಪಯುಕ್ತ ಎಂದು ರೈತರು ಬಿಸಾಡುತ್ತಿರುವ ಬಗ್ಗೆ ಗೊತ್ತಿತ್ತು. ಒಣಗಿದ ಮೇಲೆ ಕೆಲವರು ಬೆಂಕಿ ಹಚ್ಚಿ ಸುಟ್ಟರೆ, ಇನ್ನು ಕೆಲವರು ಹಾಗೇ ಬಿಡುತ್ತಾರೆ. ಇದರಿಂದ ಪರಿಸರ ಮಾಲಿನ್ಯ ಹೆಚ್ಚು. ಅದನ್ನು ಅಲ್ಲೇ ಬಿಟ್ಟರೆ ಟ್ರ್ಯಾಕ್ಟರ್ಗೆ ಹಣ ಕೊಟ್ಟು ತೆಗೆಸಬೇಕು. ಆದ್ದರಿಂದ ಇದರ ಬಗ್ಗೆ ಯೋಚನೆ ಮಾಡಿದೆವು. ಸ್ಥಳೀಯ ವಸ್ತುಗಳನ್ನೇ ಬಳಸಿ ಕರಕುಶಲ ಉತ್ಪನ್ನಗಳನ್ನು ತಯಾರಿಸುವ ಆಲೋಚನೆ ಬಂದಿತು ಎಂದು ಉದ್ಯಮದ ಆರಂಭಿಕ ದಿನಗಳನ್ನು ಪ್ರಸ್ತಾಪಿಸಿದರು.
ಅದರಂತೆ ಇದೀಗ ಬಾಳೆ ದಿಂಡಿನ ಮೇಲ್ಭಾಗದ ವಸ್ತುವಿನಿಂದ ಚಾಪೆ, ಪರ್ಸ್, ಬ್ಯಾಗ್ಗಳನ್ನು ಪ್ಲಾಸ್ಟಿಕ್ಗೆ ಬದಲಾಗಿ ಉಪಯೋಗಿಸುವ ವಸ್ತುಗಳನ್ನು ತಯಾರು ಮಾಡುತ್ತೇವೆ. ಇನ್ನು ಬಾಳೆ ದಿಂಡಿನ ಒಳಭಾಗದ ವಸ್ತುವನ್ನು ತೆಗೆದು, ಉಪ್ಪಿನಕಾಯಿ, ಚಟ್ನಿ ಪುಡಿ, ಸಂಡಿಗೆ ರೀತಿಯ ಕೆಮಿಕಲ್ ಮುಕ್ತ ಆಹಾರ ಪದಾರ್ಥಗಳನ್ನು ತಯಾರು ಮಾಡುತ್ತೇವೆ. ಈ ಸಂದರ್ಭದಲ್ಲಿ ಬರುವ ವೇಸ್ಟೇಜ್ ಅನ್ನು ಗೊಬ್ಬರವಾಗಿ ಬದಲಾಯಿಸಿ ನಾವೇ ತೋಟಕ್ಕೆ ಬಳಸುತ್ತೇವೆ. ನಮ್ಮದು ಝೀರೋ ವೇಸ್ಟೇಜ್ ಕಾನ್ಸೆಪ್ಟ್.
![ಆಕೃತಿ ಎಕೋ ಫ್ರೆಂಡ್ಲಿಎಂಟರ್ ಪ್ರೈಸಸ್](https://etvbharatimages.akamaized.net/etvbharat/prod-images/06-12-2023/ka-mys05-28-11-2023-mankibathhandicraftphotovideo-7208092_28112023162045_2811f_1701168645_36.jpg)
ಚಿಕ್ಕದಾದ ಶೆಡ್ನಲ್ಲೇ ಕೆಲಸ ಶುರು: ಮೊದಲು ನಮ್ಮ ತೋಟದಲ್ಲಿ ಒಂದು ಚಿಕ್ಕದಾದ ಶೆಡ್ ಇತ್ತು. ಅಲ್ಲೇ ಯಂತ್ರೋಪಕರಣಗಳನ್ನು ತೆಗೆದುಕೊಂಡು ಬಂದು ಅಳವಡಿಸಿ, ಈ ಕೆಲಸವನ್ನು ಆರಂಭಿಸಿದೆವು. ವೇಸ್ಟ್ ಆಗುವ ಬಾಳೆ ದಿಂಡನ್ನ ಬಳಸಿ ಕರಕುಶಲ ವಸ್ತುಗಳು ಹಾಗೂ ದಿಂಡಿನ ಒಳಭಾಗದಿಂದ ತಿನ್ನುವ ಆಹಾರ ಪದಾರ್ಥಗಳನ್ನು ತಯಾರು ಮಾಡುತ್ತೇವೆ. ಮೊದಲು ಮಾರ್ಕೆಟ್ ತುಂಬಾ ಕಷ್ಟ ಇತ್ತು. ಆದರೆ, ಈಗ ಪ್ಲಾಸ್ಟಿಕ್ ಬ್ಯಾಗ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದ್ದು, ಮಾರ್ಕೆಟ್ ಚೆನ್ನಾಗಿದೆ ಎಂದು ಹೇಳುವ ವರ್ಷಾ, ಚಾಮರಾಜನಗರ ಸುತ್ತಮುತ್ತ ಬಾಳೆ ಬೆಳೆಯುತ್ತಾರೆ, ಜೊತೆಗೆ ನಮ್ಮ ಭೂಮಿಯಲ್ಲೂ ಬಾಳೆ ಬೆಳೆಯುವುದರಿಂದ ಕಚ್ಚಾ ಪದಾರ್ಥಗಳಿಗೆ ತೊಂದರೆ ಇಲ್ಲ ಎನ್ನುತ್ತಾರೆ ಎಂದು ಹರ್ಷ ವ್ಯಕ್ತಪಡಿಸಿದರು.
![ವರ್ಷ ಉಮ್ಮತ್ತೂರು](https://etvbharatimages.akamaized.net/etvbharat/prod-images/06-12-2023/ka-mys03-28-11-2023-munkeebathstory-7208092_28112023153820_2811f_1701166100_258.jpg)
ಸ್ವಯಂ ಉದ್ಯೋಗ ಆರಂಭಿಸಿ: ಓದಿ ಕೆಲಸಕ್ಕೆ ಹೋಗಬೇಕೆಂಬ ಕಾಲ ಈಗ ಇಲ್ಲ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು, ಸ್ವಯಂ ಉದ್ಯೋಗ ಪಡೆದರೆ ಸಮಾಜದಲ್ಲಿ ನಾಲ್ಕು ಜನರಿಗೆ ಕೆಲಸ ನೀಡಬಹುದು. ನಾನು ಮನ್ ಕಿ ಬಾತ್ ಕಾರ್ಯಕ್ರಮದಿಂದ ಪ್ರೇರಣೆಗೊಂಡು ಸಣ್ಣ ಉದ್ಯಮ ಸ್ಥಾಪನೆ ಮಾಡಿದೆ. ಅದೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನನ್ನ ಕೆಲಸ ಮೆಚ್ಚಿದ್ದು ಹೆಮ್ಮೆ ಅನಿಸುತ್ತದೆ, ಜೊತೆಗೆ ಖುಷಿ ತಂದಿದೆ. ಇದರ ನಿರೀಕ್ಷೆಯೂ ಇರಲಿಲ್ಲ ಎನ್ನತ್ತಾರೆ ವರ್ಷ ಉಮ್ಮತ್ತೂರು.
ಇದನ್ನೂ ಓದಿ: ಕೈಗಾರಿಕಾ ಮತ್ತು ಕರಕುಶಲ ವಸ್ತುಗಳ ಮಾರಾಟ ಮೇಳಕ್ಕೆ ತೆರೆ.. ನಶಿಸುತ್ತಿರುವ ಕುಂಬಾರಿಕೆ ಉಳಿಸಲು ಬೇಕಿದೆ ನೆರವು