ಮೈಸೂರು: ಮೈಸೂರಿನ ಕಿಸಾನ್ ಸ್ವರಾಜ್ ಐದನೇ ಸಮ್ಮೇಳನ ಉದ್ಘಾಟನೆ ಮಾಡಿ ಮಾತನಾಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಈ ಸಮ್ಮೇಳನವನ್ನು ಮೈಸೂರಿನಲ್ಲಿ ಆಯೋಜನೆ ಮಾಡಿರುವುದು ತುಂಬಾ ಹೆಮ್ಮೆಯ ವಿಚಾರ. ನಾನು ಮೈಸೂರು ಅರಮನೆಯ ಜವಾಬ್ದಾರಿಯನ್ನು ವಹಿಸಿಕೊಂಡು 7 ವರ್ಷವಾಗಿದೆ. ಇದರಲ್ಲಿ ಹಲವಾರು ರೈತ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೇನೆ. ರೈತ ಚಟುವಟಿಕೆಗಳು, ಅವರ ಸಮಸ್ಯೆಗಳು, ಅಲ್ಲಿನ ಪದ್ಧತಿಗಳು, ರೈತ ಕ್ಷೇತ್ರದ ಬದಲಾವಣೆಗಳ ಬಗ್ಗೆ ತಿಳಿದುಕೊಂಡಿದ್ದೇನೆ ಎಂದರು.
ಹಾಗೆ ಮಾತನಾಡಿದ ಅವರು, ಸಾವಯವ ಕೃಷಿ ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯ ಇವುಗಳನ್ನು ಬಗೆ ಹರಿಸಲು ಇರುವ ವಿಧಾನಗಳ ಬಗ್ಗೆ ತಜ್ಞರೊಂದಿಗೆ ಚರ್ಚೆ ಮಾಡಿ ಕೆಲವು ವಿಚಾರಗಳನ್ನು ತಿಳಿದುಕೊಂಡಿದ್ದು, ಒಬ್ಬ ಯುವಕನಾಗಿ ಕಲಿಯುವ ದಾರಿಯಲ್ಲಿ ಸಾರ್ವತ್ರಿಕ ಸತ್ಯ ಎಂದರೆ ರೈತರ ಹಿತ ರಕ್ಷಣೆಯಿಂದ ದೇಶ ಸಮೃದ್ಧವಾಗುತ್ತದೆ ಎಂದು ಯದುವೀರ್ ಹೇಳಿದರು.
ನಾವೆಲ್ಲ ಈಗ ಪ್ರಕೃತಿ ಸಂರಕ್ಷಣೆ ಮಾಡಬೇಕು. ಮಣ್ಣಿನ ಸಂರಕ್ಷಣೆ, ನೀರಿನ ಸಂರಕ್ಷಣೆ, ವಾಯು ಮಾಲಿನ್ಯ ನಿಯಂತ್ರಣ ಮಾಡಲು ಹಲವಾರು ಕಾರ್ಯಕ್ರಮಗಳನ್ನು ಮಾಡಬೇಕಾಗಿದ್ದು, ನನ್ನ ಅಭಿಪ್ರಾಯದಲ್ಲಿ ಪ್ರತಿಯೊಬ್ಬ ನಾಗರೀಕನು ರೈತನಾದರೆ ಎಲ್ಲವೂ ಸರಿಯಾಗುತ್ತದೆ ಎಂದರು.
ರೈತರು ಜಮೀನಿನಲ್ಲಿ ಕೆಲಸ ಮಾಡುವುದು ಅಷ್ಟೇ ಮುಖ್ಯ ಅಲ್ಲ, ರೈತ ಪದ್ದತಿ, ಸಮಸ್ಯೆ, ಕ್ಷೇತ್ರದ ಬದಲಾವಣೆ ಬಗ್ಗೆ ತಿಳಿವಳಿಕೆ ಮೂಡಿಸಿಕೊಳ್ಳಬೇಕು ಅದು ಈಗ ಮುಖ್ಯ ಎಂದ ಅವರು ನಗರದ ಜನರಿಗೆ ರೈತ ಕ್ಷೇತ್ರದ ಬಗ್ಗೆ ಮಾಹಿತಿಯಿಲ್ಲ. ರೈತರಿಗೆ ನಗರದ ಬಗ್ಗೆ ಮಾಹಿತಿಯಿಲ್ಲ. ಇವರಿಬ್ಬರ ನಡುವಿನ ಬಾಂಧವ್ಯ ಇಲ್ಲದೆ ಇರುವುದು ಇದರ ಪ್ರಭಾವ ರೈತ ಕ್ಷೇತ್ರಕ್ಕೆ ಬೀರುತ್ತದೆ.
ಹಾಗಾಗಿ ನಗರ ಮತ್ತು ರೈತರ ನಡುವಿನ ಹೊಸ ಆವಿಷ್ಕಾರಗಳು ಬದಲಾವಣೆಗಳು, ಹೊಸ ಕೃಷಿ ಪದ್ಧತಿಗಳ ಬಗ್ಗೆ ರೈತರಿಗೆ ತಿಳುವಳಿಕೆ ಮೂಡಲು ನಗರದೊಂದಿಗೆ ಅವರ ಬಾಂಧವ್ಯ ಮುಖ್ಯವಾಗಿರುತ್ತದೆ. ಮೈಸೂರಿನಲ್ಲಿ ನಡೆಯುತ್ತಿರುವ ಐದನೇ ಕಿಸಾನ್ ಸ್ವರಾಜ್ ಸಮ್ಮೇಳನದಲ್ಲಿ ಹಲವಾರು ಹೊಸ ರೀತಿಯ ಕೃಷಿ ಪದ್ಧತಿಗಳು ಪರಿಚಯವಾಗುತ್ತಿದ್ದು, ಈ ಬಗ್ಗೆ ರೈತರು ಇಲ್ಲಿಗೆ ಬಂದು ಮಾಹಿತಿ ಪಡೆದುಕೊಳ್ಳಿ ಎಂದು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದರು.
ಇದನ್ನೂ ಓದಿ: ಕೆಂಪೇಗೌಡ ಪ್ರತಿಮೆ ಅನಾವರಣ ಪಕ್ಷದ ಕಾರ್ಯಕ್ರಮದಂತಿದೆ: ಹೆಚ್.ವಿಶ್ವನಾಥ್ ಬೇಸರ