ಮೈಸೂರು: ಕಣದಲ್ಲಿ ಹುರುಳಿ ಒಕ್ಕಲು ಮಾಡುತ್ತಿದ್ದ ಮಹಿಳೆ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ಸ್ಥಳದಲ್ಲೇ ಅವರು ಸಾವನ್ನಪ್ಪಿರುವ ಘಟನೆ ಬಿಳಿಕೆರೆ ಹೋಬಳಿಯ ಚಿಕ್ಕ ಬೀಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಚಿಕ್ಕ ಬೀಚನಹಳ್ಳಿ ಗ್ರಾಮದ ಚಿಕ್ಕಮ್ಮ (55) ಇವರು ಗಂಡ ಸಿದ್ದೇಗೌಡರ ಜೊತೆ ತಮ್ಮ ಜಮೀನಿನಲ್ಲಿ ಬೆಳೆದ ಹುರುಳಿ ಒಕ್ಕಲು ಮಾಡಲು ಕಣ ಮಾಡುತ್ತಿದ್ದರು. ಈ ವೇಳೆ ಕಾಡಿನಿಂದ ಆಹಾರ ಅರಸಿ ಬಂದ ಕಾಡಾನೆ ಏಕಾಏಕಿ ದಂಪತಿಗಳ ಮೇಲೆ ದಾಳಿ ಮಾಡಿದೆ. ಚಿಕ್ಕಮ್ಮ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಡ ಸಿದ್ದೇಗೌಡ ತಪ್ಪಿಸಿಕೊಂಡಿದ್ದಾರೆ. ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಇದೇ ಸಮಯದಲ್ಲಿ ಜಮೀನಿನಲ್ಲಿದ್ದ ರಂಜು ಎಂಬವರಿಗೆ ಆನೆ ಸೊಂಡಿಲಿನಿಂದ ಹೊಡೆದು ಗಾಯಗೊಳಿಸಿದೆ ಮತ್ತು ರವಿ ಎಂಬವರಿಗೆ ಕಾಲಿನಿಂದ ತುಳಿದು ಗಾಯಗೊಳಿಸಿದೆ. ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಿಳಿಕೆರೆ ಪೊಲೀಸ್ ಠಾಣೆ ಅಧಿಕಾರಿಗಳು ಹಾಗೂ ಆರ್ಎಫ್ಒ ನಂದಕುಮಾರ್ ನೇತೃತ್ವದ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಕಾಡಾನೆಯನ್ನು ಅರಣ್ಯಕ್ಕೆ ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಆಸ್ಪತ್ರೆಗೆ ಶಾಸಕ ಜಿ ಟಿ ದೇವೇಗೌಡ ಭೇಟಿ: ಕಾಡಾನೆ ದಾಳಿಯಿಂದ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರವಿ ಮತ್ತು ರಂಜು ಅವರನ್ನು ಶಾಸಕ ಜಿ ಟಿ ದೇವೇಗೌಡ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ನಂತರ ಮೃತಪಟ್ಟ ಚಿಕ್ಕಮ್ಮ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಶೀಘ್ರವೇ ಅನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಿ. ಸರ್ಕಾರದಿಂದ ಕೊಡುವ ಪರಿಹಾರವನ್ನು ಬೇಗ ಕೊಡಿಸುವಂತೆ ಅರಣ್ಯಾಧಿಕಾರಿಗಳಿಗೆ ಶಾಸಕ ಸೂಚಿಸಿದ್ದಾರೆ.
ಇದನ್ನೂ ಓದಿ: ಕಾಡಾನೆ ಹಾವಳಿಯಿಂದ ಬೇಸತ್ತ ಮಲೆನಾಡ ರೈತರು; ಖೆಡ್ಡಾ ತೋಡಿ ಆನೆ ಬೀಳಿಸಲು ಉಪಾಯ