ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆ ಹಾಗೂ ಅಶ್ವಪಡೆಗೆ ಕುಶಾಲತೋಪು ಸಿಡಿಸುವ ಮೊದಲ ತಾಲೀಮನ್ನು ನಡೆಸಲಾಗಿದ್ದು, ಈ ವೇಳೆ ಗಜಪಡೆ ಮತ್ತು ಅಶ್ವಪಡೆ ಬೆಚ್ಚಿದೆ.
![ಕುಶಾಲತೋಪನ್ನು ಸಿಡಿಸಿದ ವೇಳೆ ಹೊರಬಂದ ಹೊಗೆ](https://etvbharatimages.akamaized.net/etvbharat/prod-images/kn-mys-03-12-09-2022-dasaracannonfiringrehearshalnews-7208092_12092022144506_1209f_1662974106_981.jpg)
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಗಜಪಡೆಗೆ ಈಗಾಗಲೇ ತಾಲೀಮನ್ನು ಆರಂಭಿಸಿದ್ದು, ಇದರ ಜೊತೆಗೆ ಜಂಬೂಸವಾರಿ ದಿನ ಸಿಡಿಸುವ ಕುಶಾಲತೋಪಿನ ಪೂರ್ವಭಾವಿ ತಾಲೀಮು ಇಂದು ನಡೆಯಿತು.
![ಕುಶಾಲತೋಪು ತಾಲೀಮಿನ ವೇಳೆ ಬೆಚ್ಚಿಬಿದ್ದ ಗಜಪಡೆ](https://etvbharatimages.akamaized.net/etvbharat/prod-images/kn-mys-03-12-09-2022-dasaracannonfiringrehearshalnews-7208092_12092022144506_1209f_1662974106_383.jpg)
ಅರಮನೆಯ ಹೊರ ಆವರಣದಲ್ಲಿರುವ ಕೋಟೆ ಮಾರಮ್ಮ ದೇವಾಲಯದ ಬಳಿ 14 ಗಜಪಡೆ ಹಾಗೂ 43 ಅಶ್ವಪಡೆಗೆ ಕುಶಾಲತೋಪುಗಳನ್ನು ಸಿಡಿಸುವ ತಾಲೀಮನ್ನು ನಡೆಸಲಾಗಿದ್ದು, ನಗರ ಶಸಸ್ತ್ರ ಮೀಸಲು ಪಡೆಯ ನುರಿತ ಸಿಬ್ಬಂದಿಯಿಂದ ಕುಶಾಲತೋಪು ಸಿಡಿಸುವ ತಾಲೀಮಿನಲ್ಲಿ 7 ಫಿರಂಗಿ ಗಾಡಿಗಳಿಂದ 3 ಸುತ್ತು 21 ಕುಶಾಲತೋಪುಗಳನ್ನು ಸಿಡಿಸಲಾಯಿತು.
![ಕುಶಾಲತೋಪು ತಾಲೀಮಿನ ವೇಳೆ ಆಗಮಿಸಿದ ಗಜಪಡೆ](https://etvbharatimages.akamaized.net/etvbharat/prod-images/kn-mys-03-12-09-2022-dasaracannonfiringrehearshalnews-7208092_12092022144506_1209f_1662974106_1051.jpg)
ಈ ಸಂದರ್ಭದಲ್ಲಿ ಮೊದಲ ಬಾರಿಗೆ ದಸರಾಗೆ ಆಗಮಿಸಿರುವ ಭೀಮ, ಸುಗ್ರೀವ, ಪಾರ್ಥ, ಸಾರಥಿ ಹಾಗೂ ಶ್ರೀರಾಮ ಆನೆಗಳು ಜೊತೆಗೆ ಕೆಲವು ಅಶ್ವಗಳು ತಾಲೀಮಿನ ವೇಳೆ ಬೆದರಿದವು. ಈ ವೇಳೆ ಗೋಪಾಲಸ್ವಾಮಿ ಆನೆಯ ಶಬ್ದಕ್ಕೆ ಕುದುರೆಯೂ ಸಹ ಬೆಚ್ಚಿತು.
![ಸಿಬ್ಬಂದಿಗಳಿಗೆ ತರಭೇತಿ ನೀಡುತ್ತಿರುವುದು](https://etvbharatimages.akamaized.net/etvbharat/prod-images/kn-mys-03-12-09-2022-dasaracannonfiringrehearshalnews-7208092_12092022144506_1209f_1662974106_33.jpg)
ನಗರ ಪೊಲೀಸ್ ಕಮಿಷನರ್ ಹೇಳಿದ್ದೇನು.. ಮೈಸೂರು ನಗರ ಪೊಲೀಸ್ ಕಮಿಷನರ್ ಡಾ ಚಂದ್ರಗುಪ್ತ ಮಾತನಾಡಿ, ಮೊದಲ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿಯಾಗಿ ನಡೆದಿದ್ದು, ಇನ್ನೆರಡು ಬಾರಿ ಕುಶಾಲತೋಪು ಸಿಡಿಸುವ ತಾಲೀಮನ್ನು ನಡೆಸಲಾಗುವುದು. ಗಜಪಡೆಯ ಜೊತೆಗೆ ಅಶ್ವಾರೋಹಿ ದಳದ ಸಿಬ್ಬಂದಿಯೂ ಈ ತಾಲೀಮಿನಲ್ಲಿ ಭಾಗವಹಿಸಿದ್ದು, ಈ ಬಾರಿ ದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಲಿರುವ ಯಾವುದೇ ಭದ್ರತಾ ಕ್ರಮಗಳ ಕುರಿತು ಮಾಹಿತಿಯನ್ನು ಸದ್ಯಕ್ಕೆ ನೀಡಲಾಗುವುದಿಲ್ಲ. ಮುಂಬರುವ ದಿನಗಳಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಡಿಸಿಎಫ್ ಕರಿಕಾಳನ್ ಪ್ರತಿಕ್ರಿಯೆ.. ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಗಜಪಡೆಗೆ ಪ್ರತಿ ವರ್ಷದಂತೆ ಕುಶಾಲತೋಪು ಸಿಡಿಸುವ ತಾಲೀಮನ್ನು ನಡೆಸಲಾಗುವುದು. ಮೊದಲ ಹಂತದ ಕುಶಾಲತೋಪು ಸಿಡಿಸುವ ತಾಲೀಮಿನಲ್ಲಿ ನಾಲ್ಕು ಆನೆಗಳು ಬೆದರಿದವು.
ಮುಂಬರುವ 2 ಹಂತದ ತಾಲೀಮಿನಲ್ಲಿ 4 ಆನೆಗಳು ಹೊಂದಿಕೊಳ್ಳುತ್ತವೆ. ಕುಶಾಲತೋಪನ್ನು ಜಂಬೂಸವಾರಿಯ ಸಮಯದಲ್ಲಿ ಹೊರಭಾಗದಲ್ಲಿ ಸಿಡಿಸುತ್ತಾರೆ. ಅಂಬಾರಿ ಆನೆಯ ಜೊತೆಗೆ 2 ಕುಮ್ಕಿ ಆನೆಗಳು ಎಡ ಮತ್ತು ಬಲ ಭಾಗದಲ್ಲಿ ಸಾಗುತ್ತವೆ.
ಈ ಬಾರಿ ಅರ್ಜುನ ಆನೆ ನೌಪತ್ ಆನೆಯಾಗಿ ಜಂಬೂಸವಾರಿಯ ನೇತೃತ್ವವನ್ನು ವಹಿಸಿದ್ದು, ಮೆರವಣಿಗೆಯಲ್ಲಿ ಮೊದಲು ಸಾಗುತ್ತದೆ. ಉಳಿದ ಆನೆಗಳು ನಂತರ ಸಾಗುತ್ತವೆ. ಜಂಬೂಸವಾರಿಯ ಆನೆ ಕೊನೆಯಲ್ಲಿ ಸಾಗುತ್ತದೆ ಎಂದು ಡಿಸಿಎಫ್ ಕರಿಕಾಳನ್ ವಿವರಿಸಿದರು.