ಮೈಸೂರು: ಯೋಗ ಎನ್ನುವುದು ಭಾರತೀಯರಿಗೆ ಪರಂಪರಾಗತವಾಗಿ ಗುರುಹಿರಿಯರಿಂದ ಬಂದಂತಹ ಉಡುಗೊರೆ. ಪ್ರತಿನಿತ್ಯ ಯೋಗಭ್ಯಾಸ ಮಾಡುವುದರಿಂದ ದೇಹ ಮತ್ತು ಮನಸ್ಸು ಎರಡನ್ನೂ ಆರೋಗ್ಯವಾಗಿಡಲು ಸಹಕಾರಿಯಾಗಲಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಚಾಮುಂಡಿ ಬೆಟ್ಟದ ದೇವಸ್ಥಾನದ ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್ಪಿವೈಎಸ್ಎಸ್) ವತಿಯಿಂದ ಹಮ್ಮಿಕೊಂಡಿದ್ದ ಯೋಗ ಚಾರಣ ಮತ್ತು ದುರ್ಗ ನಮಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಹುತೇಕ ಎಲ್ಲಾ ದಸರಾ ಕಾರ್ಯಕ್ರಮಗಳನ್ನು ಬಹಳ ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಸೆ.26 ರಿಂದ ಅ.3ರ ವರೆಗೆ ನಿತ್ಯ ಯೋಗಾಸನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ ಎಂದರು.
ಇದನ್ನೂ ಓದಿ: ರಾಜವಂಶಸ್ಥರಿಂದ ಸಾಂಪ್ರದಾಯಿಕ ಸರಸ್ವತಿ ಪೂಜೆ.. ವೀರಭದ್ರ ಕುಣಿತಕ್ಕೆ ಹೆಜ್ಜೆ ಹಾಕಿದ ಸಚಿವ ಸೋಮಶೇಖರ್
ಬಹುತೇಕ ಕಾರ್ಯಕ್ರಮಗಳು ಇಂದು ಅಂತ್ಯವಾಗಲಿದೆ. ನಾಳೆ ಮೆರವಣಿಗೆಗೆ ಸಿದ್ಧತೆ ಮಾಡಿ ಕೊಳ್ಳಲಾಗುತ್ತದೆ. ಮುಖ್ಯಮಂತ್ರಿಗಳು ಸಹ ನಾಳೆ ಸಂಜೆ ಆಗಮಿಸಲಿದ್ದಾರೆ. ಎರಡು ವರ್ಷ ಕೋವಿಡ್ನಿಂದ ಅದ್ಧೂರಿ ದಸರಾ ಮಾಡಿರಲಿಲ್ಲ. ಉನ್ನತ ಮಟ್ಟದ ಸಮಿತಿ ತೀರ್ಮಾನದಂತೆ ಆಚರಣೆ ಮಾಡಲಾಗುತ್ತಿದ್ದು, ಅಧಿಕಾರಿಗಳು ಕೂಡ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ. ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಶಿವಣ್ಣ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೇ ಶ್ರೀನಿವಾಸ್, ಮೂಡಾ ಮಾಜಿ ಅಧ್ಯಕ್ಷರಾದ ರಾಜೀವ್, ಜಂಗಲ್ಸ್ ಲಾಡ್ಜ್ಸ್ ಅಂಡ್ ರೆಸಾರ್ಟ್ಸ್ ಮಾಜಿ ಅಧ್ಯಕ್ಷರಾದ ಅಪ್ಪಣ್ಣ ಸೇರಿದಂತೆ ನಾನಾ ನಿಗಮ ಮಂಡಳಿಗಳ ಅಧ್ಯಕ್ಷರು ಉಪಸ್ಥಿತರಿದ್ದರು.