ಮೈಸೂರು: 'ದಕ್ಷಿಣ ಕಾಶಿ' ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ತಾಲ್ಲೂಕಿನ ನಂಜುಂಡೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಹೊಳೆಯಲ್ಲಿ ಸ್ನಾನ ಮಾಡುವ ಭಕ್ತರು ಎಚ್ಚರ ವಹಿಸಬೇಕಾಗಿದೆ.
ನೇತ್ರಾವತಿ ನದಿ ಬತ್ತಿರುವ ಹಿನ್ನಲೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಭಕ್ತರಿಗೆ ಪ್ರವಾಸವನ್ನು ಸ್ವಲ್ಪ ದಿನಗಳ ಕಾಲ ಮುಂದೂಡಿ ಎಂದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಂಜುಂಡೇಶ್ವರನ ದರ್ಶನ ಪಡೆಯಲು ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.
ಇಲ್ಲಿಗೆ ಬರುವ ಭಕ್ತಾದಿಗಳು ದೇವರ ದರ್ಶನಕ್ಕೂ ಮುನ್ನ ಕಪಿಲಾ ನದಿಯಲ್ಲಿ ಮೀಯುವುದು ಸಂಪ್ರದಾಯ. ಕೆಲ ದಿನಗಳಿಂದ ಇಲ್ಲಿನ ಸುಜಾತಫಾರಂನ ಒಳಚರಂಡಿ ನೀರು ಕಪಿಲೆ ಸೇರುತ್ತಿದ್ದು,ನದಿ ಮಲಿನಗೊಳ್ತಿದೆ. ಆದರೆ, ಈ ಬಗ್ಗೆ ಮಾಹಿತಿ ಇರದ ಎಷ್ಟೋ ಭಕ್ತಾದಿಗಳು ಈಗಲೂ ನದಿಯಲ್ಲಿ ಮಿಂದೆದ್ದು ಬರುತ್ತಾರೆ.
ಈ ಬಗ್ಗೆ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಮಲಿನ ನೀರು ನದಿ ಸೇರುವುದು ಹೀಗೆಯೇ ಮುಂದುವರೆದಲ್ಲಿ ಭಕ್ತರು ರೋಗ ರುಜಿನಗಳಿಂದ ಬಳಲುವ ದಿನ ದೂರವಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.