ಮೈಸೂರು: ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಜಂಜಾಟದಿಂದ ಮನನೊಂದು ರಾಜಕೀಯ ನೈಪಥ್ಯದಿಂದ ದೂರ ಉಳಿಯಬೇಕು ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಅವರು ಘೋಷಿಸಿದ್ದಾರೆ. ಆದರೆ, ಅವರ ಅಭಿಮಾನಿಗಳು ಮತ್ತೆ ರಾಜಕಾರಣದಲ್ಲಿ ಸ್ವಚ್ಛಂದವಾಗಿ ಹಾರಾಡಬೇಕು ಎಂದು ಒತ್ತಾಯಿಸಿದ್ದಾರೆ.
ಹುಣಸೂರು ತಾಲ್ಲೂಕಿನ ಐ.ಕೆ.ರಸ್ತೆಯಲ್ಲಿರುವ ವಿಶ್ವನಾಥ್ ಅವರ ನಿವಾಸದ ಸಮೀಪದಲ್ಲಿ ನಡೆಸಿದ ಸಭೆಯಲ್ಲಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಡಿ ಎಂದು ಒತ್ತಾಯಿಸಿದ ಅಭಿಮಾನಿಗಳು ಹಾಗೂ ಹಿತೈಷಿಗಳು, ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದ್ದಾರೆ.
ದಲಿತ ಸಂಘರ್ಷ ಸಮಿತಿಯ ಮುಖಂಡ ಹರಿಹರ ಆನಂದಸ್ವಾಮಿ, ನಗರಸಭಾ ಅಧ್ಯಕ್ಷ ಸತೀಶ್ ಕುಮಾರ್, ನಾಯಕ ಜನಾಂಗದ ಮುಖಂಡ ಅಣ್ಣಯ್ಯನ ನಾಯಕ ಸೇರಿದಂತೆ ಅನೇಕರು ಯಾವುದೇ ಕಾರಣಕ್ಕೂ ಇಂತಹ ನಿರ್ಧಾರಕ್ಕೆ ಮುಂದಾಗಬೇಡಿ ಎಂದು ಮನವಿ ಮಾಡಿದ್ದಾರೆ.
ಮುಂದಿನ ವಿಧಾನಸಭೆಯಲ್ಲಿ ಸ್ಪರ್ಧಿಸುವುದಿಲ್ಲ. ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೆಎಚ್.ವಿಶ್ವನಾಥ್ ಅವರು ಈಚೆಗೆ ಘೋಷಿಸಿದ್ದರು.