ಮೈಸೂರು: ನಗರದ ವೈದ್ಯಕೀಯ ಕಾಲೇಜಿನಲ್ಲಿ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಮೃತಪಟ್ಟಿರುವ ವೈದ್ಯನ ಮೃತದೇಹವನ್ನು ಅದೇ ಕಾಲೇಜಿಗೆ ನೀಡಲು ಕುಟುಂಬ ಮುಂದಾಗಿದೆ.
ಕುವೆಂಪುನಗರ ಎಂ ಬ್ಲಾಕ್ ನಿವಾಸಿ ಡಾ.ಎಚ್.ಟಿ.ಚಿದಾನಂದ (71) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಓದಿ, ಕೆ.ಆರ್.ಆಸ್ಪತ್ರೆಯಲ್ಲಿ ಫೆಥಾಲಜಿ ವಿಭಾಗದಲ್ಲಿ ಸೇವೆ ಆರಂಭಿಸಿ ವಿಭಾಗದ ಮುಖ್ಯಸ್ಥರು ಕೂಡ ಆಗಿದ್ದರು.
ನಂತರ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಂಸ್ಥಾಪಕ ನಿರ್ದೇಶಕರಾಗಿ, ಶಿವಮೊಗ್ಗ ಸರ್ಕಾರಿ ಆಸ್ಪತ್ರೆಯ ಡೀನ್ ಆಗಿ ಸೇವೆ ಸಲ್ಲಿಸಿ ನಿವೃತ್ತಗೊಂಡಿದ್ದರು. ಅಲ್ಲದೇ ವೈದ್ಯಕೀಯ ಲೇಖಕರಾಗಿ ಗುರುತಿಸಿಕೊಂಡಿದ್ದ ಡಾ.ಚಿದಾನಂದ ಅವರು ರಚಿಸಿದ್ದ ‘ಚರ್ಬಿ ಊಟ ಹೃದಯ ಸ್ಫೋಟ’ ಪುಸ್ತಕ ಜನಮೆಚ್ಚುಗೆ ಗಳಿಸಿತ್ತು.
ಮೃತದೇಹವನ್ನು ಇವರು ಓದಿದ ಕಾಲೇಜಿಗೆ ದಾನ ಮಾಡಲು ಕುಟುಂಬಸ್ಥರು ನಿರ್ಧಾರ ಕೈಗೊಂಡಿದ್ದು, ಇಂದು ಮಧ್ನಾಹ್ನ ವೈದ್ಯರ ಮೃತದೇಹವನ್ನು ಮೈಸೂರು ವೈದ್ಯಕೀಯ ಕಾಲೇಜಿಗೆ ದಾನ ಮಾಡಲಿದ್ದಾರೆ.
ಸಂತಾಪ ಸೂಚಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ:
ಡಾ.ಚಿದಾನಂದ ಅವರ ಸಾವಿಗೆ ಸಂತಾಪ ಸೂಚಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್, ಚಿದಾನಂದ ನನ್ನ ಆಪ್ತ ಸ್ನೇಹಿತ. ವಿದ್ಯಾರ್ಥಿ ದೆಸೆಯಿಂದಲೂ ನನಗೆ ತುಂಬಾ ಒಡನಾಡಿ. ಮಾನವತಾವಾದಿ. ಈತನನ್ನು ಕಳೆದುಕೊಂಡು ಬಹಳ ನೋವಾಗಿದೆ. ಕಷ್ಟದಲ್ಲಿದ್ದವರಿಗೆ ತುಂಬಾ ಚೆನ್ನಾಗಿ ಸ್ಪಂದಿಸುತ್ತಿದ್ರು. ಆರೋಗ್ಯದ ಬಗ್ಗೆ ತುಂಬಾ ಕಾಳಜಿ ಹೊಂದಿದ್ದ ಚಿದಾನಂದ್ ಸಾಕಷ್ಟು ಆರೋಗ್ಯ ಕಾಳಜಿಯುಳ್ಳ ಪುಸ್ತಕ ಬರೆದಿದ್ದಾರೆ ಸ್ಮರಿಸಿದರು.