ಮೈಸೂರು: ಮಾಜಿ ಸಚಿವ ಡಿ.ಕೆ. ಶಿವಕುಮಾರ್, ಹುಣಸೂರು ಉಪಚುನಾವಣೆಯ ಪ್ರಚಾರದ ಅಖಾಡಕ್ಕಿಳಿದಿದ್ದಾರೆ. ಮಾಜಿ ಸಚಿವ ವಿಶ್ವನಾಥ್ ವಿರುದ್ಧ ಕೆಂಡಾಮಂಡಲರಾಗಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಹುಣಸೂರಿನ ಬಿಳಿಕೆರೆ ಹೊಬಳಿಯ ಕೊಮ್ಮೆಗೌಡನಕೊಪ್ಪಲು ಗ್ರಾಮಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರಿಗೆ ಪೂರ್ಣಕುಂಭದ ಮೂಲಕ ಸ್ವಾಗತ ಕೋರಲಾಯಿತು. ನಂತರ ಆರತಿ ಬೆಳಗಿ ಮಹದೇಶ್ವರ ದೇವಸ್ಥಾನಕ್ಕೆ ಕಾರ್ಯಕರ್ತರು ಡಿ ಕೆ ಶಿವಕುಮಾರ್ ಅವರನ್ನ ಬರಮಾಡಿಕೊಂಡರು.
ಕೊಮ್ಮೆಗೌಡನಕೊಪ್ಪಲು ಗ್ರಾಮದ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ನಿವೃತ್ತಿ ಪಡೆದುಕೊಂಡು ಮನೆಯಲ್ಲಿ ಕುಳಿತ್ತಿದ್ದ ವಿಶ್ವನಾಥ್ಗೆ ಜೆಡಿಎಸ್, ಶಾಸಕ ಸ್ಥಾನ ಕೊಟ್ಟು ಪಕ್ಷದ ರಾಜ್ಯಾಧ್ಯಕ್ಷನಾಗಿ ಮಾಡಿತು.ಆದರೆ, ಅಧಿಕಾರ ಹಾಗೂ ಹಣದ ಆಮಿಷಕ್ಕಾಗಿ ದ್ರೋಹ ಮಾಡಿ ಬಿಜೆಪಿಗೆ ಹೋದ ಎಂದು ಏಕವಚನದಲ್ಲೇ ಟೀಕಿಸಿದರು.