ಮೈಸೂರು: ಆರ್.ಆರ್.ನಗರವನ್ನು ಗೂಂಡಾಗಿರಿ ರಾಜಕಾರಣದಿಂದ ಗೆಲ್ಲಲು ಡಿ.ಕೆ.ಬ್ರದರ್ಸ್ ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಇಂದು ಮೈಸೂರು ಅರಮನೆಯ ಆವರಣದಲ್ಲಿ ಮಾವುತ ಹಾಗೂ ಕಾವಾಡಿ ಕುಟುಂಬದವರಿಗೆ ಉಪಹಾರ ಕೂಟ ಏರ್ಪಾಡು ಮಾಡಿ, ಅವರಿಗೆ ಸ್ವತಃ ಉಪಹಾರ ಬಡಿಸಿದ ಸಂಸದೆ ಶೋಭಾ ಕರಂದ್ಲಾಜೆ, ಮಾಧ್ಯಮಗಳ ಜೊತೆ ಮಾತನಾಡಿದರು.
ಈ ವೇಳೆ, ಶಿರಾ ಮತ್ತು ಆರ್.ಆರ್.ನಗರ ಎರಡು ಉಪಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ಜೊತೆಗೆ ಪರಿಷತ್ನ ಎಲ್ಲಾ ಸ್ಥಾನಗಳನ್ನು ನಮ್ಮ ಪಕ್ಷ ಗೆಲ್ಲಲಿದೆ. ಶಿರಾದಲ್ಲಿ ರಾಜೇಶ್ ಗೌಡ ಸೇರ್ಪಡೆಯಿಂದ ನಮಗೆ ಗೆಲ್ಲುವ ಅವಕಾಶ ಹೆಚ್ಚಾಗಿದ್ದು, ಮೋದಿ ಹಾಗೂ ಯಡಿಯೂರಪ್ಪ ಸರ್ಕಾರಗಳು ಕೊರೊನಾದ ನಡುವೆಯೂ ಅಭಿವೃದ್ಧಿಯತ್ತ ದಾಪುಗಾಲು ಹಾಕಿವೆ. ಶಿರಾವನ್ನು ನಾವು ಈ ಬಾರಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆರ್.ಆರ್.ನಗರ ಚುನಾವಣೆಯನ್ನು ಗೂಂಡಾಗಿರಿ ಮಾಡುವ ಮೂಲಕ ಗೆಲ್ಲಲು ಡಿ.ಕೆ.ಬ್ರದರ್ಸ್ ಪ್ರಯತ್ನಿಸುತ್ತಿದ್ದಾರೆ. ಏಕೆಂದರೆ ಡಿ.ಕೆ.ಶಿವಕುಮಾರ್ ಅವರ ಸಹೋದರ ಆ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದು, ಗೂಂಡಾಗಿರಿ ಮತ್ತು ಅವ್ಯವಹಾರ ಮೂಲಕ ಆರ್.ಆರ್.ನಗರ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಗಮನಹರಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದೇವೆ ಎಂದರು.
ಬಿಹಾರ ಪ್ರಣಾಳಿಕೆ ವಿವಾದ:
ಬಿಹಾರ ಚುನಾವಣಾ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಕೊರೊನಾ ಲಸಿಕೆ ಬಗ್ಗೆ ಬಿಜೆಪಿ ಹೇಳಿರುವುದು ಸರಿಯಾಗಿದೆ. ಚುನಾವಣಾ ಸಂದರ್ಭದಲ್ಲಿ ಲಸಿಕೆ ಬಂದ ನಂತರ ಅದನ್ನು ಜನರಿಗೆ ನೀಡುತ್ತೇವೆ ಎಂದು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಜನರಿಗೆ ಉಚಿತ ಹಾಗೂ ಕಡಿಮೆ ದರದಲ್ಲಿ ಲಸಿಕೆ ಬಂದ ನಂತರ ನೀಡುತ್ತೇವೆ ಎಂದು ಹೇಳುವ ಅಧಿಕಾರ ಮೋದಿ ಸರ್ಕಾರಕ್ಕಿದೆ ಎಂದರು.