ಮೈಸೂರು: ಕೋವಿಡ್ ಭಯದಿಂದ ಜನರಲ್ಲಿ ಆತಂಕ ದಿನೇ ದಿನೆ ಹೆಚ್ಚಾಗುತ್ತಿದೆ. ಇದರಿಂದಾಗಿ ಸಾಕಷ್ಟು ಜನ ಮಧ್ಯರಾತ್ರಿ ಕರೆ ಮಾಡುತ್ತಾರೆ. ಹೀಗಾಗಿ ನನಗೆ ನಿದ್ದೆ ಮಾಡಲು ಆಗುತ್ತಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವೆಂಕಟೇಶ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಗರದ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟಿಂಗ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಖಾಸಗಿಯಾಗಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಶುರು ಮಾಡಿರುವುದು ಉತ್ತಮವಾಗಿದೆ. ಈ ಹಿಂದೆ ಮೈಸೂರಿನ ಜನರು ವೈರಸ್ ಟೆಸ್ಟಿಂಗ್ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಗಂಟೆಗಟ್ಟಲೆ ನಿಂತುಕೊಳ್ಳಬೇಕಾಗುತ್ತಿತ್ತು ಆದ್ರೀಗ ಇಲ್ಲಿಗೆ ಬಂದರೆ ಬೇಗ ಕೆಲಸವಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆ, ಕೋವಿಡ್ ಆಸ್ಪತ್ರೆ , ಕೆ.ಆರ್.ಆಸ್ಪತ್ರೆ ಮತ್ತು ಚೆಲುವಾಂಬ ಆಸ್ಪತ್ರೆಗಳಲ್ಲಿ ಟೆಸ್ಟ್ ಮಾಡುತ್ತಿದ್ದೇವೆ. ಆದರೆ ಅಲ್ಲಿಗೆ ತುಂಬಾ ಜನ ಬರುತ್ತಿದ್ದಾರೆ. ವೈರಸ್ನಿಂದ ಭಯಗೊಂಡಿರುವ ಜನ ರಾತ್ರಿ 12 ಗಂಟೆಗೆ ಕಾಲ್ ಮಾಡುತ್ತಾರೆ. ಇದರಿಂದ ನನಗೆ ನಿದ್ದೆ ಮಾಡಲು ಬಿಡುತ್ತಿಲ್ಲ. ಬೇರೆ ಊರಿನಿಂದ ಬಂದವರಿಗೆ ಪಾಸಿಟಿವ್ ಬಂದರೆ ಇವರಿಗೂ ಭಯ, ನಮಗೂ ಭಯ ಎಂದು ತಿಳಿಸಿದರು.