ಮೈಸೂರು: ಕೇಂದ್ರ ಸರ್ಕಾರವು ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಸೌಲಭಗಳು ಅರ್ಹರಿಗೆ ತಲುಪಬೇಕು. ಕುಡಿಯುವ ನೀರಿನ ಕಾಮಗಾರಿಗಳು ಸೇರಿದಂತೆ ಇತರ ಸೌಲಭಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಇದೇ ವೇಳೆ ಸೂಚಿಸಿದರು.

ಜಿ.ಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ ಸಮಿತಿ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹುಣಸೂರಿನಲ್ಲಿ ನಿರ್ಮಾಣವಾಗಿರುವ ಹೊಸ ಸರ್ಕಾರಿ ಆಸ್ಪತ್ರೆಗೆ ಮೂಲ ಸೌಕರ್ಯಗಳನ್ನು ಒದಗಿಸಿ ಆಸ್ಪತ್ರೆ ಶಿಫ್ಟ್ ಮಾಡಿಸುವಂತೆ ಸೂಚಿಸಿದರು.
ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ 900 ಭ್ರೂಣ ಹತ್ಯೆಗಳು ಆಗಿರುವ ಕುರಿತು ಪ್ರಸ್ತಾಪಿಸಿದ ಅವರು, ಈ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ಏಕೆ ಇರಲಿಲ್ಲ? ಕೆಪಿಎಂಇ ಆ್ಯಕ್ಟ್ ಅಡಿ ಸ್ಕ್ಯಾನಿಂಗ್ ಸೆಂಟರ್ಗಳು ಅನುಮತಿ ಪಡೆದಿರಬೇಕು. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ಗಳನ್ನು ತೆರವು ಮಾಡಬೇಕು. ಅನುಮತಿ ಪಡೆಯದೇ ಫ್ಲೆಕ್ಸ್, ಬ್ಯಾನರ್ ಹಾಕುವವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಿ ಎಂದರು.
ಕೆ ಆರ್ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮೈಸೂರು ವೈದ್ಯಕೀಯ ಕಾಲೇಜು ಜುಲೈ, 2024ಕ್ಕೆ 100 ವರ್ಷಗಳು ತುಂಬಲಿದೆ. ಶತಮಾನೋತ್ಸವ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಮೈಸೂರು ಮೆಡಿಕಲ್ ಕಾಲೇಜಿನ ನಿರ್ದೇಶಕರಿಗೆ ಸೂಚನೆ ನೀಡಿದರು. ಹುಂಡುವಾಡಿ ಯೋಜನೆಯಡಿ 164 ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಹಾಡ್ಯದಿಂದ ಬೆಟ್ಟದಪುರ ಭಾಗದ 303 ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಮೈಸೂರು ಸ್ವಚ್ಛ ನಗರಿ ಎಂದು ಹೆಸರಾಗಿದ್ದು, ಇದನ್ನು ಕಾಪಾಡಿಕೊಳ್ಳಬೇಕು. ಸ್ಲಂ ಬೋರ್ಡ್ ವತಿಯಿಂದ ಅಲರ್ಟ್ ಆಗಿರುವವರು ಅಲ್ಲಿಗೆ ಶಿಫ್ಟ್ ಆಗಬೇಕು. ಕೆಲವರು ಸ್ಲಂ ಬೋರ್ಡ್ನಿಂದ ನಿರ್ಮಿಸಿರುವ ಮನೆಗಳಲ್ಲಿ ಅನಧಿಕೃತವಾಗಿ ಇದ್ದಾರೆ. ಕೆಲವರು ಮನೆ ಬಾಡಿಗೆ ನೀಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ಅರ್ಹರಿಗೆ ಸೌಲಭ್ಯ ಒದಗಿಸುವಂತೆ ಸ್ಲಂ ಬೋರ್ಡ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನರಸಿಂಹರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 21 ಸಾವಿರ ಮನೆಗಳ ನಲ್ಲಿಗಳಿಗೆ ಮೀಟರ್ ಅಳವಡಿಕೆ ಮಾಡಿಲ್ಲ. ಇದರಿಂದ ಮಹಾನಗರ ಪಾಲಿಕೆಗೆ ಬರಬೇಕಾದ ಆದಾಯ ವ್ಯರ್ಥವಾಗುತ್ತಿದೆ. ವಾಣಿ ವಿಲಾಸ ನೀರು ಸರಬರಾಜು ವತಿಯಿಂದ ಮೀಟರ್ ಅಳವಡಿಕೆ ಮಾಡುವಂತೆ ಸೂಚನೆ ನೀಡಿದರು.
ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಕೊರತೆ ಆಗಿದೆ. ಪೂರ್ಣ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ರೈತರಿಗೆ ಬರ ಪರಿಹಾರವನ್ನು ಆದಷ್ಟು ಬೇಗ ನೀಡಬೇಕು. ಮೈಸೂರು ವಿಳ್ಳೆದೆಲೆ, ಮೈಸೂರು ಮಲ್ಲಿಗೆ ಮತ್ತು ನಂಜನಗೂಡು ರಸಬಾಳೆಗೆ ಜಿಯೋ ಟ್ಯಾಗ್ ದೊರೆತಿದೆ. ಇದನ್ನು ರೀನಿವಲ್ ಮಾಡಿಸಬೇಕು. ಇವುಗಳನ್ನು ಹೆಚ್ಚು ಪ್ರಚಾರ ಮಾಡಿ ಬೇಡಿಕೆ ಹೆಚ್ಚುವಂತೆ ಮಾಡಬೇಕು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಹುಣಸೂರಿನ ಧರ್ಮಪುರ ಹಾಗೂ ಹಿರಿಕ್ಯಾತನಹಳ್ಳಿಯಲ್ಲಿ ಸ್ಟೇಟ್ ಬ್ಯಾಂಕ್ ಇಂಡಿಯಾದ ಬ್ರಾಂಚ್ಗಳನ್ನು ತೆರೆಯಬೇಕು. ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಉತ್ತಮ ಸ್ಥಾನ ಬರಬೇಕು. ಈ ನಿಟ್ಟಿನಲ್ಲಿ ಉತ್ತಮ ಬೋಧನೆ ನೀಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೂ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳು ಹೇಳಿದ್ದೇನು: ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಮಾತನಾಡಿ ಆಯುಷ್ಮನ್ ಆರೋಗ್ಯ ಕರ್ನಾಟಕ ಕಾರ್ಡ್ಗಳನ್ನು ಇಲ್ಲಿಯವರೆಗೆ 25 ಲಕ್ಷ ಕಾರ್ಡ್ ವಿತರಣೆ ಮಾಡಬೇಕಿತ್ತು. ಆದರೆ, 7.6 ಲಕ್ಷ ಕಾರ್ಡ್ ವಿತರಣೆ ಮಾಡಲಾಗಿದೆ. ನಿಗದಿತ ಗುರಿ ತಲುಪಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಗ್ರಾಮ ಒನ್, ಆರೋಗ್ಯ ಕೇಂದ್ರಗಳಲ್ಲಿ ವಿತರಣೆ ಮಾಡಲಾಗುತ್ತಿದೆ. ಆರೋಗ್ಯ ಮಿತ್ರರನ್ನು ಆಸ್ಪತ್ರೆಗಳಿಗೆ ನೀಡಲಾಗಿದೆ. ಸ್ಕ್ಯಾನಿಂಗ್ ಸೆಂಟರ್ಗಳು ಕಡ್ಡಾಯವಾಗಿ ಭ್ರೂಣ ಲಿಂಗ ಪತ್ತೆ ಮಾಡುವುದಿಲ್ಲ ಎಂಬ ಮುಚ್ಚಳಿಕೆ ನೀಡಿರಬೇಕು. ಈಗಾಗಲೇ ಭ್ರೂಣ ಹತ್ಯೆ ನಡೆದಿರುವ ಸ್ಕ್ಯಾನಿಂಗ್ ಸೆಂಟರ್ ಕಟ್ಟಡದ ಮಾಲೀಕರು ಹೊಣೆಗಾರರಾಗುತ್ತಾರೆ. ಈಗಾಗಲೇ ಈ ಬಗ್ಗೆ ತನಿಖೆ ನಡೆಯುತ್ತಿದೆ. ನಿಗದಿತ ವಿದ್ಯಾರ್ಹತೆ ಇಲ್ಲದವರು ಅಲೋಪಥಿ ಹಾಗೂ ಇಂಗ್ಲಿಷ್ ಮೆಡಿಷಿನ್ ನೀಡುವುದು ಕಂಡು ಬಂದರೆ ಶಿಸ್ತು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೋಟಿಫೈ ಆಗದೇ ಇರುವ ಹಲವು ಕೊಳಗೇರಿಗಳಿದ್ದು, ಇದನ್ನು ಸರ್ವೇ ಮಾಡಿ ಇವರಿಗೆ ಸ್ಲಂ ಬೋರ್ಡ್ ವತಿಯಿಂದ ಮನೆಗಳನ್ನು ನಿರ್ಮಾಣ ಮಾಡಿಕೊಡುವ ವ್ಯವಸ್ಥೆ ಮಾಡಲಾಗುವುದು. ಬರ ಪರಿಹಾರವನ್ನು ನೀಡಲು 69 ಕೋಟಿ ಪರಿಹಾರವನ್ನು ನೀಡುವಂತೆ ವರದಿ ಸಲ್ಲಿಸಲಾಗಿದೆ. ಸರ್ಕಾರದಿಂದ 20 ಕೋಟಿ ಅನುದಾನ ನೀಡಲಾಗಿದೆ. ಬೆಳೆ ಹಾನಿಯನ್ನು ರೈತರು ಫ್ರೂಟ್ ಐಡಿಯಲ್ಲಿ ನೋಂದಣಿ ಮಾಡಬೇಕು. ನೋಂದಣಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಸ್ಟಿಕತೆ ಕೇಂದ್ರಗಳನ್ನು ತೆರೆದು ಪೌಷ್ಟಿಕ ಆಹಾರವನ್ನು ನೀಡಬೇಕು. ಪ್ರತಿ ತಾಲೂಕಿನ ಆಸ್ಪತ್ರೆಗಳಲ್ಲಿ ಅಪೌಷ್ಟಿಕ ಮಕ್ಕಳಿಗೆ ಬೆಡ್ಗಳನ್ನು ಮೀಸಲಿಟ್ಟು ಚಿಕತ್ಸೆ ನೀಡಬೇಕು. ಎಸ್ಎಸ್ಎಲ್ಸಿ ಫಲಿತಾಂಶ ಉತ್ತಮವಾಗಿ ಬರಲು ಅಗತ್ಯ ಸಿದ್ಧತೆಗಳನ್ನು ಮಾಡಬೇಕು. ಅನುತ್ತೀರ್ಣ ಆಗುವ ಸಂಭವ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿಶೇಷ ಬೋಧನೆ ಮಾಡಬೇಕು ಎಂದು ಡಿಡಿಪಿಐಗೆ ಸೂಚನೆ ನೀಡಿದರು.
ಇದನ್ನೂ ಓದಿ: ಮೂರು ತಿಂಗಳ ಅವಧಿಯಲ್ಲಿ 242 ಭ್ರೂಣ ಹತ್ಯೆ : ಪೊಲೀಸ್ ತನಿಖೆಯಲ್ಲಿ ಆತಂಕಕಾರಿ ಮಾಹಿತಿ ಬಯಲು