ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕಾರಣ ಮಹತ್ತರ ತಿರುವು ಪಡೆದುಕೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭವಿಷ್ಯ ನುಡಿದಿದ್ದಾರೆ.
ಹುಣಸೂರು ತಾಲ್ಲೂಕಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅನರ್ಹ ಶಾಸಕರನ್ನು ಸೋಲಿಸಲು ಜನರೇ ಕಾಯುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅನರ್ಹರ ತ್ಯಾಗದಿಂದ ರಾಜ್ಯದ ಅಧಿಕಾರ ಸಿಕ್ಕಿದೆ. ಅನರ್ಹರು ಅವರ ಸ್ವಾರ್ಥಕ್ಕಾಗಿ ರಾಜೀನಾಮೆ ಕೊಟ್ಟಿದ್ದಾರೆ. ರಾಜ್ಯದ ಅಭಿವೃದ್ದಿಗೆ ಅವರ ಕೊಡುಗೆ ಏನು? ಎಂದು ಪ್ರಶ್ನಿಸಿದರು.
'ಅನರ್ಹರ ಪೈಕಿ ಡಾ. ಸುಧಾಕರ್ ಅತ್ಯಂತ ದೊಡ್ಡ ಸುಳ್ಳುಗಾರ'
ಡಾ.ಸುಧಾಕರ್ ಅವರು ನಮ್ಮ ಪಕ್ಷ ಬಿಡುವ ಮುನ್ನ ನನ್ನ ಹಾಗೂ ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಿ ಎಲ್ಲೂ ಹೋಗುವುದಿಲ್ಲ ಎಂದಿದ್ದರು. ಆದರೆ ಕೊನೆ ಕ್ಷಣದಲ್ಲಿ ಪಕ್ಷಕ್ಕೆ ದ್ರೋಹ ಮಾಡಿದರು. 17 ಅನರ್ಹರ ಪೈಕಿ ಡಾ. ಸುಧಾಕರ್ ಅತ್ಯಂತ ದೊಡ್ಡ ಸುಳ್ಳುಗಾರ ಎಂದರು.
'ಎಂಟಿಬಿ ವಿರುದ್ಧ ಆಯೋಗಕ್ಕೆ ದೂರು'
ಎಂಟಿಬಿ ನಾಗರಾಜ್ ಕಾಂಗ್ರೆಸ್‌ನ ಹಲವರಿಗೆ ಸಾಲ ಕೊಟ್ಟೆ ಅಂತಾರೆ. ನಾಮಪತ್ರ ಸಮಯದಲ್ಲಿ ಯಾಕೆ ಇದನ್ನು ಉಲ್ಲೇಖ ಮಾಡಲಿಲ್ಲ. ಇವರ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದರು.
ಇನ್ನು ಬಿಜೆಪಿ ಅಧಿಕಾರಕ್ಕೊಸ್ಕರ ಏನು ಬೇಕಾದರೂ ಮಾಡುತ್ತದೆ ಎನ್ನುವುದಕ್ಕೆ ಮಹಾರಾಷ್ಟ್ರದಲ್ಲಿ ನಡೆದ ಹೈಡ್ರಾಮವೇ ಸಾಕು. ಇದನ್ನು ದೇಶದ ಜನ ನೋಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ರು.