ಮೈಸೂರು: ಎಲ್ಲಾ ರಾಜ್ಯಗಳಲ್ಲಿಯೂ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಈ ವಿಚಾರ ಅವರಿಗೇಕೆ ತಿಳಿದಿಲ್ಲ? ಕಣ್ಣು ಕುರುಡಾಗಿದೆಯೇ?, ಕಿವಿ ಕಿವುಡಾಗಿದೆಯೇ?, ಸಂವೇದನೆ ಹೊರಟು ಹೋಗಿದೆಯೇ ಎಂದು ಎಸ್.ಎಲ್.ಭೈರಪ್ಪ ಹೇಳಿಕೆಗೆ ಸಾಹಿತಿ ದೇವನೂರ ಮಹಾದೇವ ತಿರುಗೇಟು ನೀಡಿದ್ದಾರೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಕೃಷಿ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ ಸ್ವರಾಜ್ ಇಂಡಿಯಾ, ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ದಲಿತ ಸಂಘರ್ಷ ಸಮಿತಿ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮಕ್ಕೂ ಮುನ್ನ ಈ ರೀತಿಯ ಅಸಮಾಧಾನ ಹೊರಹಾಕಿದ್ದಾರೆ.
ಓದಿ: ಪಕ್ಷದ ಶಿಸ್ತು ಉಲ್ಲಂಘಿಸಿದವರ ಉಚ್ಛಾಟನೆ ಅನಿವಾರ್ಯ: ಸಾ.ರಾ.ಮಹೇಶ್
ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಪಂಜಾಬಿಗಳು ಮಾತ್ರ ಪ್ರತಿಭಟನೆ ಮಾಡುತ್ತಿಲ್ಲ, ಹರಿಯಾಣ, ಉತ್ತಾರಾಖಂಡ ಸೇರಿದಂತೆ ಮುಂತಾದ ರಾಜ್ಯದ ರೈತರು ಭಾಗಿಯಾಗಿದ್ದಾರೆ. ಆದರೆ ಈ ವಿಚಾರ ಭೈರಪ್ಪ ಅವರಿಗೇಕೆ ತಿಳಿದಿಲ್ಲ? ಮಾಧ್ಯಮದವರು ಅವರನ್ನೇ ಪ್ರಶ್ನಿಸಬೇಕಾಗಿದೆ ಎಂದು ಸಾಹಿತಿ ದೇವನೂರು ಮಹಾದೇವ ಕುಟುಕಿದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದವರನ್ನೆಲ್ಲಾ ನಮ್ಮವರೇ ಎಂದು ಹೇಳಿಕೊಂಡು ಓಡಾಡುವ ಕೆಟ್ಟ ಸಂಪ್ರದಾಯವನ್ನು ಬೇರೆ ಪಕ್ಷಗಳೂ ಅನುಸರಿಸುತ್ತಿವೆ. ಆಪರೇಷನ್ ಕಮಲದ ಮೂಲಕ ಬಿಜೆಪಿ ಈ ಕೆಟ್ಟ ಸಂಪ್ರದಾಯ ಆರಂಭಿಸಿತು. ಇದರಿಂದ ಬಿಜೆಪಿಯವರು ನೈತಿಕ ರಾಜಕಾರಣವನ್ನು ಅನೈತಿಕ ಮಾಡಿದ್ದಾರೆ. ನೈತಿಕ ರಾಜಕಾರಣಕ್ಕೆ ವಿಷ ಹಾಕಿದ್ದಾರೆ ಎಂದು ಟೀಕಿಸಿದರು.