ಮೈಸೂರು: ರಾಜಕಾರಣಿಗಳನ್ನು ಕೊಳೆತ ಹಣ್ಣಿಗೆ ಹೋಲಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ದೇವನೂರು ಮಹಾದೇವ ಪತ್ರ ಬರೆದಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಬಗ್ಗೆ ಸುರೇಶ್ ಕುಮಾರ್ ಹೇಳಿಕೆ ವಿಚಾರ ಪತ್ರದಲ್ಲಿ ಪ್ರಸ್ತಾಪ ಮಾಡಿ, ಆಡಬಾರದ ಮಾತನ್ನಾಡಿದರೆ ಕೇಳಬಾರದ ಮಾತು ಕೇಳಬೇಕಾಗುತ್ತದೆ ಎಂದು ಹೇಳಿಕೆ ನೀಡಿದ್ದ ಸಚಿವ ಸುರೇಶ್ ಕುಮಾರ್ ಅವರ ಹೇಳಿಕೆ ನೋಡಿ ನನಗೆ ಶಾಕ್ ಆಯಿತು ಎಂದು ಪತ್ರದಲ್ಲಿ ಬರೆದಿದ್ದಾರೆ.

ದೊರೆಸ್ವಾಮಿಯವರನ್ನ ನಕಲಿ ಸ್ವಾತಂತ್ರ್ಯ ಹೋರಾಟಗಾರ, ಪಾಕ್ ಏಜೆಂಟ್ ಎಂದಿರುವ ರಾಜಕಾರಣಿಗಳ ವಿರುದ್ಧ ದೇವನೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಹುತೇಕ ರಾಜಕಾರಣಿಗಳಿಗೆ ನಾಲಿಗೆ ಇಲ್ಲ. ಇನ್ನೂ ಕೆಲವರಿಗೆ ನಾಲ್ಕಾರು ನಾಲಿಗೆಗಳು ಇವೆ. ಒಂದೊಂದು ಕಡೆ ಹೋದಾಗ, ಒಂದೊಂದು ನಾಲಿಗೆ ಬಳಸ್ತಾರೆ ಎಂದು ಟೀಕಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ನಿರುದ್ಯೋಗ ಹಾಗೂ ಕೈಗಾರಿಕಾ ಪ್ರದೇಶಗಳನ್ನ ಅಭಿವೃದ್ಧಿ ಮಾಡದ ಸಚಿವ ಯತ್ನಾಳ್ಗೂ ದೇವನೂರು ಮಹಾದೇವ ಚಾರ್ಜ್ ಮಾಡಿದ್ದಾರೆ. ಜನಪ್ರತಿನಿಧಿಗಳು ಹೊಣೆಗೇಡಿಗಳಾಗಿದ್ದಾರೆಂದು ಬೇಸರ ವ್ಯಕ್ತಪಡಿಸಿರುವ ದೇವನೂರು ಮಹದೇವ, ಕೊಳೆತ ಹಣ್ಣುಗಳ ಜೊತೆ ಒಳ್ಳೆಯ ಹಣ್ಣುಗಳು ಸೇರಿ ಹಾಳಾಗಬಹುದೇ? ನಿಮ್ಮ ಹೇಳಿಕೆ ನೋಡಿದಾಗ ಈ ಪ್ರಶ್ನೆ ಸುಳಿದಾಡಿತು ಎಂದು ಪತ್ರದಲ್ಲಿ ಬರೆದಿದ್ದಾರೆ.