ಮೈಸೂರು: ತರಕಾರಿ ತೆಗೆದುಕೊಂಡು ಹೋಗ್ತಿದ್ದೀವಿ ಅಂತ ಹೇಳಿ ಕೇರಳಕ್ಕೆ ಗಾಂಜಾ ತೆಗೆದುಕೊಂಡು ಹೋಗುತ್ತಿದ್ದ ನಾಲ್ವರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹೇಂದ್ರ ಬುಲೆರೋ ಮ್ಯಾಕ್ಸಿ ಟ್ರಕ್ಸ್ ವಾಹನ (KL-20, 5050)ದ ಮೂಲಕ, ನಂಜನಗೂಡು ಮಾರ್ಗವಾಗಿ ಹೋಗುತ್ತಿದ್ದವರನ್ನು ಖಚಿತ ಮಾಹಿತಿ ಮೇರೆಗೆ ಮೈಸೂರು ಏರ್ಫೋರ್ಟ್ ಬಳಿ ತಡೆದು ನಿಲ್ಲಿಸಿ ಪೊಲೀಸರು ತಪಾಸಣೆ ನಡೆಸಿದ್ದಾರೆ.
ಮೇಲ್ನೋಟಕ್ಕೆ ತರಕಾರಿ ಕಾಣುತ್ತಿರುವುದನ್ನು ಕಂಡು ಅನುಮಾನಗೊಂಡ ಪೊಲೀಸರು ಪೂರ್ತಿ ತೆಗೆಸಿ ನೋಡಿದ್ದಾರೆ. ಕೆ.ಆರ್.ಠಾಣೆ ಇನ್ಸ್ಪೆಕ್ಟರ್ ರಘು ಹಾಗೂ ಸಿಬ್ಬಂದಿ 86 ಕೆ.ಜಿ.300 ಗ್ರಾಂ ತೂಕ ಇರುವ ಗಾಂಜಾ ವಶಪಡಿಸಿಕೊಂಡು, ವಾಹನದಲ್ಲಿದ್ದ ಕೇರಳದ ಮಲ್ಲಪುರಂ ಜಿಲ್ಲೆ ಮಹಮಮ್ಮದ್ ಶಫಿ (42), ಸಲೀಂ (30), ಇಬ್ರಾಹಿಂ ಕುಟ್ಟಿ (32), ಷಫೀ (28) ಬಂಧಿಸಿ, ಸರಹದ್ದಿನ ಆಧಾರದ ಮೇಲೆ ಗ್ರಾಮಾಂತರ ಠಾಣಾ ಪೊಲೀಸರಿಗೆ ಪ್ರಕರಣ ಒಪ್ಪಿಸಿದ್ದಾರೆ.
ಈ ಕುರಿತು ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರು, ಟೊಮೊಟೊ ಕ್ರೇಟ್ಗಳ ಮಧ್ಯದಲ್ಲಿ ಗಾಂಜಾ ಬಚ್ಚಿಟ್ಟು, ಹೋಗುತ್ತಿದ್ದಾಗ ಮಾಹಿತಿ ಮೇರೆಗೆ ಬಂಧಿಸಲಾಗಿದೆ. ಕೇರಳದ ಕೆಲ ಜಿಲ್ಲೆಗಳಿಗೆ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ನಾಲ್ವರಿಂದ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದೀವಿ ಎಂದು ವಿವರಣೆ ನೀಡಿದರು.