ಮೈಸೂರು: ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಸಾಕಷ್ಟು ಹೊಸ ಬೆಳವಣಿಗೆಗೆ ಕಾರಣವಾಗಿದೆ. ಆರ್ಎಸ್ಎಸ್ ಮುಖಂಡರು ಸಹ ಅಲ್ಲಿನ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವಂತೆ ಅಭಿವೃದ್ಧಿ ಕಂಡಿದೆ. ದೆಹಲಿಯಲ್ಲಿನ ಬದಲಾವಣೆಯಿಂದಾಗಿ ಪಂಜಾಬಿನಲ್ಲಿಯೂ ನಮ್ಮ ಪಕ್ಷ ಗೆಲುವು ಕಂಡಿದೆ ಎಂದು ಎಎಪಿ ಮುಖಂಡ, ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪಂಜಾಬ್ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಸೋಲಿಸಿದವರು ಓರ್ವ ಸಾಮಾನ್ಯ ವ್ಯಕ್ತಿಯೇ ಆಗಿದ್ದಾರೆ. ಹೀಗಾಗಿ ಆ ರೀತಿಯ ಬೆಳವಣಿಗೆಯನ್ನು ಕರ್ನಾಟಕದಲ್ಲಿಯೂ ಪಕ್ಷ ಬಯಸಿದೆ. ಅರವಿಂದ ಕ್ರೇಜಿವಾಲ್ ಅವರ ಸರ್ಕಾರ ಯೋಜನೆಗಳನ್ನು ಬಿಟ್ಟಿಯಾಗಿ ಕೊಡುತ್ತಿಲ್ಲ. ಬಿಟ್ಟಿ ಯೋಜನೆಗಳನ್ನು ಕೊಟ್ಟು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ ಎಂಬುದು ಸುಳ್ಳು. ಜನರ ತೆರಿಗೆ ಹಣ ಯಾರಿಗೆ ತಲುಪಬೇಕೋ ಅವರಿಗೆ ಕೊಡುತ್ತಿದ್ದೇವೆ. ದೆಹಲಿಯಲ್ಲಿ ಕೊಡುತ್ತಿರುವ ಸೌಲಭ್ಯಗಳನ್ನು ಸಾಲ ಮಾಡಿ ಕೊಡುತ್ತಿಲ್ಲ. ಭ್ರಷ್ಟಾಚಾರ ಮುಕ್ತ ಸರ್ಕಾರ ಇರುವುದರಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.
ದೆಹಲಿಯ ಮುಖ್ಯಮಂತ್ರಿ ಯಾವುದೇ ವಿದೇಶಕ್ಕೆ ಹೋಗುತ್ತಿಲ್ಲ. ಬದಲಾಗಿ ಶಿಕ್ಷಕರನ್ನು ವಿದೇಶಕ್ಕೆ ಕಳುಹಿಸಿ ಅಲ್ಲಿನ ಪದ್ಧತಿ ಅಳವಡಿಸುತ್ತಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳು ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆ ಸೇರುತ್ತಿದ್ದಾರೆ. ರಾಜ್ಯದಲ್ಲೂ ಪಂಜಾಬ್, ದೆಹಲಿ ಮಾದರಿಯಲ್ಲೇ ಸರ್ಕಾರ ಮಾಡಬೇಕು ಎಂಬುದು ನಮ್ಮ ಉದ್ದೇಶ. ಹಣದ ಸೋರಿಕೆಯನ್ನು ಯಶಸ್ವಿಯಾಗಿ ತಡೆಗಟ್ಟಿದ್ರೆ ಇದು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಒಂದೇ ಮಳೆಗೆ ತತ್ತರಿಸಿದ ಬೆಂಗಳೂರು ಜನ: ಟ್ಯಾಕ್ಸ್ ಕಟ್ಟೋದು ಈ ರೀತಿ ಕಷ್ಟ ಪಡೋದಕ್ಕಾ ಎಂದು ಆಕ್ರೋಶ
ಹಣಬಲ ಹಾಗೂ ಜಾತಿಯ ಬಲದಿಂದ ನಾವು ರಾಜಕೀಯ ಮಾಡಲ್ಲ. ಅಭಿವೃದ್ಧಿ ಮಾಡುವುದಷ್ಟೇ ನಮ್ಮ ಉದ್ದೇಶ. ಆಮ್ ಆದ್ಮಿ ಪಕ್ಷದಲ್ಲಿ ಯುವಕರಿಗೆ ಅವಕಾಶ ನೀಡುತ್ತೇವೆ. ನಾನು 32 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಈಗ ಆಮ್ ಆದ್ಮಿ ಪಕ್ಷವನ್ನ ಸೇರಿದ್ದೇನೆ. ಬೆಳೆಯುತ್ತಿರುವ ಪಕ್ಷವನ್ನ ಸೇರಿಕೊಂಡು ಭ್ರಷ್ಟಾಚಾರ ಮುಕ್ತ ಆಡಳಿತ ಮಾಡಬೇಕು. ಯುವಕರು, ಹೊಸಬರು ರಾಜಕೀಯಕ್ಕೆ ಬರಬೇಕು ಎಂದು ಆಮ್ ಆದ್ಮಿ ಪಕ್ಷ ಸೇರಿದ್ದೇನೆ ಎಂದರು.
ಪಿಎಸ್ಐ ಪರೀಕ್ಷಾ ಅಕ್ರಮ ವಿಚಾರ ಕುರಿತು ಮಾತನಾಡಿದ ಭಾಸ್ಕರ್ ರಾವ್, ನಾನು ಕಮಿಷನರ್ ಆದ ಸಂದರ್ಭದಲ್ಲಿ ಈ ಅಕ್ರಮದ ವಾಸನೆ ಬಂದಿತ್ತು. ಒಬ್ಬ ಕಿರಿಯ ಅಧಿಕಾರಿಯನ್ನು ನೇಮಕಾತಿ ವಿಭಾಗದಲ್ಲಿ ಕಮಿಷನರ್ ಮಾಡಬೇಕು ಅಂದಾಗ ನನಗೆ ಅನುಮಾನ ಬಂದಿತ್ತು. ತಮ್ಮ ರಾಜಕೀಯ ಹಿತಾಸಕ್ತಿಗೆ ಹೀಗೆ ಮಾಡುತ್ತಿದ್ದರು ಎಂದು ಈಗ ಅನಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.