ಮೈಸೂರು: ಕ್ಯಾನ್ಸರ್ ರೋಗದಿಂದ ತಾಯಿ ಸಾವನ್ನಪ್ಪಿದ ನೋವಿನ ನಡುವೆಯೂ ವಿದ್ಯಾರ್ಥಿನಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದಳು. ಈಗ ಫಲಿತಾಂಶದಲ್ಲಿ ವಿದ್ಯಾರ್ಥಿನಿ ಫಸ್ಟ್ ಕ್ಲಾಸ್ ನಲ್ಲಿ ಉತ್ತೀರ್ಣಳಾಗಿದ್ದಾಳೆ.
ಬೀರಿಹುಂಡಿ ಗ್ರಾಮದ ಲಕ್ಷ್ಮಮ್ಮ ಎಂಬುವವರು ಕ್ಯಾನ್ಸರ್ ರೋಗದಿಂದ ಸಾವನ್ನಪ್ಪಿದ್ದು, ಅವರ ಮಗಳು ದೀಪು ತಾಯಿಯ ಸಾವಿನ ದಿನವೇ ಕೊನೆಯ ಪರೀಕ್ಷೆ ಬರೆಯಬೇಕಿತ್ತು. ಆದರೆ ತಾಯಿಯ ಸಾವಿನ ನೋವಿನಿಂದ ಪರೀಕ್ಷೆ ಬರೆಯಲು ಹೋಗುವುದಿಲ್ಲ ಎಂದು ಮನೆಯಲ್ಲೇ ಇದ್ದಳು. ನಂತರ ಗ್ರಾಮದ ಜನರು, ಸಂಬಂಧಿಕರು ಧೈರ್ಯ ಹೇಳಿ ಕೊನೆಯ ಹಿಂದಿ ಪರೀಕ್ಷೆಯನ್ನು ಬರೆಯಲು ಕಳುಹಿಸಿದ್ದರು.
ಈಗ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು ದೀಪು 477 ಅಂಕ ಗಳಿಸಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ಮುಂದೆ ಬಾಲಕಿಯ ಶೈಕ್ಷಣಿಕ ಜೀವನ ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದು ಸಂಬಂಧಿಕರು ಮತ್ತು ಗ್ರಾಮಸ್ಥರು ಹಾರೈಸಿದ್ದಾರೆ.