ಮೈಸೂರು: ಈ ಬಾರಿಯ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಡಿಸೆಂಬರ್ ಎಂಟರಿಂದ ಹದಿನೈದರ ವರೆಗೆ ಭಾರತೀಯತೆ ಎಂಬ ಶೀರ್ಷಿಕೆ ಅಡಿ ನಡೆಯಲಿದೆ ಎಂದು ರಂಗಾಯಣದ ನಿರ್ದೇಶಕ ಅದ್ದಂಡ ಕಾರ್ಯಪ್ಪ ತಿಳಿಸಿದ್ದಾರೆ.
ಇಂದು ರಂಗಾಯಣದಲ್ಲಿ ನಡೆದ ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಂಗಾಯಣದ ನಿರ್ದೇಶಕ ಅದ್ದಂಡ ಕಾರ್ಯಪ್ಪ ಈ ಬಾರಿ ಡಿಸೆಂಬರ್ ಎಂಟರಿಂದ ಹದಿನೈದರ ವರೆಗೆ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ನಡೆಯಲಿದ್ದು ಈ ಬಾರಿ 7 ರಾಜ್ಯಗಳ 7 ವಿವಿಧ ಭಾಷೆಗಳ ಹಾಗೂ ಕರ್ನಾಟಕದ ಕನ್ನಡದ 12 ನಾಟಕಗಳು ಜೊತೆಗೆ ತುಳುವಿನ ಒಂದು ನಾಟಕವು ಸೇರಿ ಒಟ್ಟು 20 ನಾಟಕಗಳು ಬಹುರೂಪಿಯಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು.
ಇದರ ಜೊತೆಗೆ ಜನಪದ ಕಲಾ ಪ್ರದರ್ಶನ , ರಾಷ್ಟ್ರೀಯ ಚಲನಚಿತ್ರೋತ್ಸವ, ರಾಷ್ಟ್ರೀಯ ವಿಚಾರ ಸಂಕಿರಣ, ಪುಸ್ತಕ ಪ್ರದರ್ಶನ, ಕರಕುಶಲ ವಸ್ತುಗಳ ಪ್ರದರ್ಶನ, ದೇಶೀಯ ಆಹಾರ ಮೇಳ ಹಾಗೂ ಚಿತ್ರಕಲಾ ಶಿಬಿರಗಳು ರಂಗಾಯಣದ ಭೂಮಿಗೀತ, ಕಲಾಮಂದಿರ, ವನರಂಗ, ಬಿ ವಿ ಕಾರಂತ ರಂಗ ಚಾವಡಿ ಹಾಗೂ ಸಂಪತ್ ರಂಗಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದು, ಈ ಬಾರಿಯ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಭಾರತೀಯತೆ ಎಂಬ ಶೀರ್ಷಿಕೆಯ ಅಡಿ ನಡೆಯುತ್ತಿದೆ ಎಂದು ರಂಗಾಯಣದ ನಿರ್ದೇಶಕ ಅದ್ದಂಡ ಕಾರ್ಯಪ್ಪ ತಿಳಿಸಿದರು.
ಡಿಸೆಂಬರ್ 10ಕ್ಕೆ ಮುಖ್ಯಮಂತ್ರಿಗಳಿಂದ ಉದ್ಘಾಟನೆ: ಡಿಸೆಂಬರ್ ಎಂಟಕ್ಕೆ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಆರಂಭವಾದರೂ ಅಧಿಕೃತವಾಗಿ ಡಿಸೆಂಬರ್ 10ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಈ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಇತರ ಗಣ್ಯರು ಭಾಗವಹಿಸಲಿದ್ದಾರೆ.
ಈ ಬಗ್ಗೆ ಡಿಸೆಂಬರ್ 9 ರಂದು ಚಲನಚಿತ್ರೋತ್ಸವಕ್ಕೆ ಖ್ಯಾತ ನಟ ದೊಡ್ಡಣ್ಣ ಚಾಲನೆ ನೀಡಲಿದ್ದು, ರಂಗಾಯಣದ ಆವರಣದಲ್ಲಿ ಇರುವ ರಂಗಮಂದಿರಕ್ಕೆ ಪುನೀತ್ ರಾಜಕುಮಾರ್ ರವರ ರಂಗಮಂದಿರ ಎಂದು ಹೆಸರಿಡಲಾಗಿದೆ ಎಂದರು. ಆದರೆ, ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಮೊದಲ ದಿನ ವಿವಾದಿತ "ಟಿಪ್ಪು ನಿಜಕನಸುಗಳು" ನಾಟಕ ಪ್ರದರ್ಶನ ಆಗುತ್ತಿರುವುದು ವಿಶೇಷವಾಗಿದೆ.
ಇದನ್ನೂ ಓದಿ:ಕೆಜಿಎಫ್ ಸಿನಿಮಾ ಹಾಡು ಕೃತಿಚೌರ್ಯ ಆರೋಪ: ರಾಹುಲ್ ಗಾಂಧಿ, ಇತರ ಕೈ ನಾಯಕರಿಗೆ ಹೈಕೋರ್ಟ್ ನೋಟಿಸ್