ಮೈಸೂರು : ಹಣಕ್ಕಾಗಿ ನಕಲಿ ವಿವಿ ಹೆಸರಲ್ಲಿ ಡಾಕ್ಟರೇಟ್ ಪದವಿ ಪ್ರಧಾನ ಮಾಡುತ್ತಿದ್ದ ಕಾರ್ಯಕ್ರಮವೊಂದರ ಮೇಲೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಪ್ರಕಾಶ್ ಗೌಡ ತಿಳಿಸಿದ್ದಾರೆ.
ಪ್ರಕರಣ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಮೂಲದ ನಂಬಿಯಾರ್ ಹಾಗೂ ಶ್ರೀನಿವಾಸ್ ಎಂಬುವರನ್ನು ಬಂಧಿಸಲಾಗಿದ್ದು, ಈ ಸಂಬಂಧ ಕ್ರಿಮಿನಲ್ ಕೇಸ್ ದಾಖಲಿಸಿಕೊಳ್ಳಲಾಗುವುದು ಎಂದಿದ್ದಾರೆ.
ಕಳೆದ 8 ವರ್ಷಗಳಿಂದ ಇಂಟರ್ನ್ಯಾಷನಲ್ ಗ್ಲೋಬಲ್ ಪೀಸ್ ಹೆಸರಿನಲ್ಲಿ ಯೂನಿವರ್ಸಿಟಿ ನಡೆಸಿಕೊಂಡು ಬರುವ ಮೂಲಕ ಸಾವಿರಾರು ಜನರಿಗೆ ಗೌರವ ಡಾಕ್ಟರೇಟ್ ಹಾಗೂ ಪ್ರಶಸ್ತಿ ನೀಡಿ ವಂಚಿಸಿದ್ದಾರೆ. ಸುದ್ದಿ ತಿಳಿದು ದಾಳಿ ನಡೆಸಲಾಗಿದ್ದು ಡಾಕ್ಟರೇಟ್ ನೀಡಲು ತಂದಿದ್ದ 150 ನಕಲಿ ಪ್ರಮಾಣಪತ್ರ ಹಾಗೂ ವಿವಿಧ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಂತಹ ನಕಲಿ ಯೂನಿವರ್ಸಿಟಿಗಳನ್ನು ನಂಬಿ ಸಾರ್ವಜನಿಕರು ಮೋಸ ಹೋಗಬಾರದು ಎಂದು ಡಿಸಿಪಿ ತಿಳಿ ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ವಿಶೇಷ ವ್ಯಕ್ತಿಯಾಗಿ ಆಹ್ವಾನಿತರಾಗಿದ್ದ ಹರಿಹರ ಶಾಸಕ ರಾಮಪ್ಪ ಅವರ 'ಗೌರವ'ವನ್ನು ಡಿಸಿಪಿ ಪ್ರಕಾಶ್ ಗೌಡ ಉಳಿಸಿದ್ದಾರೆ.