ಮೈಸೂರು: ನಗರದ ಹೋಟೆಲ್ವೊಂದರಲ್ಲಿ ನಕಲಿ ಯುನಿವರ್ಸಿಟಿ ಹೆಸರಿನಲ್ಲಿ ಗೌರವ ಡಾಕ್ಟರೇಟ್ ನೀಡುವ ಪದವಿ ಪ್ರದಾನ ಕಾರ್ಯಕ್ರಮದ ಮೇಲೆ ಡಿಸಿಪಿ ಪ್ರಕಾಶ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಮೂವರು ಆಯೋಜಕರನ್ನು ಬಂಧಿಸಿದ್ದು, ಹಲವರು ಪರಾರಿಯಾಗಿದ್ದಾರೆ.
ಇಂಟರ್ ನ್ಯಾಷನಲ್ ಗ್ಲೋಬಲ್ ಪೀಸ್ ಯುನಿವರ್ಸಿಟಿ ಹೆಸರಿನಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುತ್ತೇವೆ ಎಂದು ದೇಶಾದ್ಯಂತ 150ಕ್ಕೂ ಹೆಚ್ಚು ಜನರಿಂದ ಲಕ್ಷಾಂತರ ರೂ. ಹಣ ಪಡೆದು, ಅವರಿಗೆ ಗೌರವ ಡಾಕ್ಟರೇಟ್ ನೀಡುತ್ತೇವೆಂದು ಮೈಸೂರಿನ ಖಾಸಗಿ ಹೋಟೆಲ್ವೊಂದಕ್ಕೆ ಕರೆಯಲಾಗಿತ್ತು. ಈ ಕಾರ್ಯಕ್ರಮಕ್ಕೆ ದೇಶದ ಹಲವು ರಾಜ್ಯಗಳಿಂದ 150ಕ್ಕೂ ಹೆಚ್ಚಿನ ಜನರನ್ನು ಕರೆಸಲಾಗಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹರಿಹರದ ಶಾಸಕ ರಾಮಪ್ಪ ಅವರನ್ನು ಕರೆಸಲಾಗಿತ್ತು.
ಈ ಬಗ್ಗೆ ಮಾಹಿತಿ ಪಡೆದ ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಡಾ. ಪ್ರಕಾಶ್ ಗೌಡ, ವಿಜಯನಗರ ಪೊಲೀಸರ ತಂಡದೊಂದಿಗೆ ದಾಳಿ ನಡೆಸುತ್ತಿದ್ದಂತೆ ಕಾರ್ಯಕ್ರಮದ ಪ್ರಮುಖ ಆಯೋಜಕರು ಪರಾರಿಯಾಗಿದ್ದು, ಮೂವರನ್ನು ವಶಕ್ಕೆ ಪಡೆಯಲಾಗಿದೆ. ಹರಿಹರದ ಶಾಸಕ ರಾಮಪ್ಪ ಅವರಿಗೆ ಈ ಯುನಿವರ್ಸಿಟಿ ಡಾಕ್ಟರೇಟ್ ಕೊಡಲು ಇವರು ಯಾರು? ಇದೊಂದು ನಕಲಿ ವಿವಿಯಾಗಿದ್ದು, ಜನರಿಗೆ ಮೋಸ ಮಾಡುತ್ತಿದೆ ಎಂದು ಡಿಸಿಪಿ ಪ್ರಕಾಶ್ ಗೌಡ ಮನವರಿಕೆ ಮಾಡಿಕೊಟ್ಟಿದ್ದು, ವಿಚಾರ ತಿಳಿದ ಶಾಸಕರು ವಾಪಸ್ ಆಗಿದ್ದಾರೆ.
ಈ ಕಾರ್ಯಕ್ರಮವನ್ನು ನಡೆಸಲು ಯಾವುದೇ ಅನುಮತಿ ಸಹ ಪಡೆಯದೆ ಜನರಿಗೆ ಮೋಸ ಮಾಡುತ್ತಿದ್ದ ಅರೋಪಿಗಳ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಈ ನಕಲಿ ಹೆಸರಿನ ವಿವಿ ದೇಶಾದ್ಯಂತ ಲಕ್ಷಾಂತರ ಜನರಿಗೆ ಗೌರವ ಡಾಕ್ಟರೇಟ್ ನೀಡುತ್ತೇವೆ ಎಂದು ಮೋಸ ಮಾಡಿರುವ ಶಂಕೆ ಇದ್ದು, ತನಿಖೆ ಚುರುಕುಗೊಳಿಸಲಾಗಿದೆ.