ಮೈಸೂರು: ಡಿ.ಕೆ.ಶಿವಕುಮಾರ್ ನನ್ನ ಆತ್ಮೀಯರು ಅವರ ಬಗ್ಗೆ ಅಪಾರ ಗೌರವವಿದೆ, ಅವರ ಸಂಕಷ್ಟ ನೋಡಿ ಖುಷಿ ಪಡುವ ಮನಸ್ಥಿತಿ ನನ್ನದಲ್ಲ ಎಂದು, ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪ್ಪು ತಿಂದಿದ್ದರೆ ನೀರು ಕುಡಿಯಬೇಕಾಗುತ್ತೆ ಅಂತ ಹೇಳಿದ್ದೇನೆ ಇದರಲ್ಲಿ ತಪ್ಪೇನಿದೆ, ತಪ್ಪು ಮಾಡದೇ ಇದ್ದರೆ ಆತಂಕ ಪಡುವ ಅಗತ್ಯವೇ ಇಲ್ಲ. ಕ್ಷಮೆ ಕೇಳುವಂತಹ ಹೇಳಿಕೆಯನ್ನು ನಾನು ಯಾವತ್ತೂ ನೀಡುವುದಿಲ್ಲ, ಹುಬ್ಬಳ್ಳಿಯಲ್ಲಿ ನಾನು ನೀಡಿದ ಹೇಳಿಕೆಯನ್ನು ಮತ್ತೊಮ್ಮೆ ಕೇಳಿಸಿಕೊಳ್ಳಿ ಎಂದು ಹೇಳಿದರು.
ಡಿಕೆಶಿಯನ್ನ ಬಿಜೆಪಿಗೆ ಬಲವಂತವಾಗಿ ಸೆಳೆಯಲು ಇಡಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ವಿಚಾರವಾಗಿ ಮಾತನಾಡಿ, ಕಾಶ್ಮೀರದಲ್ಲಿ ಈಗ ಭಾರತದ ಆಡಳಿತ ನಡೆಯುತ್ತಿದೆ. ಬಿಜೆಪಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇದೆ. ನಮ್ಮ ಪಕ್ಷದ ಸಿದ್ದಾಂತವನ್ನು ಒಪ್ಪಿ ಯಾರೆ ಬಂದರೂ ಸ್ವಾಗತ ಎಂದರು.
ಶೇ 90 ಭಾಗದಷ್ಟು ನಿರಾಶ್ರಿತರಿಗೆ ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ತಲುಪಿದೆ:
ಕೇಂದ್ರದ ನಿಯಮಾನುಸಾರಕ್ಕಿಂತ ಹೆಚ್ಚು ಪರಿಹಾರ ಕೊಟ್ಟಿದ್ದೇವೆ. ಸದ್ಯಕ್ಕೆ ಅದನ್ನ ಮೀರಿ ಹಣ ನೀಡಲು ಸಾದ್ಯವಿಲ್ಲ. ಶೇ 90 ಭಾಗದಷ್ಟು ನಿರಾಶ್ರಿತರಿಗೆ ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ತಲುಪಿದೆ. ಉಳಿದ ಶೇ 10 ರಷ್ಟು ಜನರಿಗೆ ಆಧಾರ್ ಕಾರ್ಡ್, ಬ್ಯಾಂಕ್ಗಳ ಸಮಸ್ಯೆ ಆಗಿದೆ. ಈ ಸಮಸ್ಯೆಗೆ ಚಕ್ ಮೂಲಕ ಹಣ ನೀಡಲು ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.