ಮೈಸೂರು: ಪ್ರತಿಯೊಂದು ಜೀವವೂ ಮುಖ್ಯ. ಇಂತಹ ಸಂದರ್ಭದಲ್ಲಿ ನನ್ನ ಮೇಲೆ ಬಂದ ಆರೋಪದಿಂದ ಕಳೆದ 10 ವರ್ಷದ ಸೇವೆಯಲ್ಲೇ ಮೊದಲ ಬಾರಿಗೆ ಬಹಳ ನೊಂದಿದ್ದೇನೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಧ್ಯಮಗಳಿಗೆ ಆಕ್ಸಿಜನ್ ದುರಂತದ ನಂತರ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದರು.
ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿಸಿ ರೋಹಿಣಿ ಸಿಂಧೂರಿ, ನನ್ನ ಮೇಲೆ ಮಾಡಿರುವ ಆರೋಪಗಳು ಸರಿಯಲ್ಲ. ತನಿಖೆಯಲ್ಲಿ ಎಲ್ಲಾ ಸತ್ಯಾಂಶಗಳು ಗೊತ್ತಾಗಲಿವೆ. ತನಿಖಾಧಿಕಾರಿಗಳಿಗೆ ಎಲ್ಲಾ ಮಾಹಿತಿಯನ್ನು ನೀಡಿದ್ದೇನೆ. ತನಿಖಾ ವರದಿ ಬರುವ ಮುನ್ನವೇ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಇದನ್ನೂ ಓದಿ: ಚಾಮರಾಜನಗರ ಆಸ್ಪತ್ರೆಯಲ್ಲಿ ರೋಗಿಗಳ ಸಾವು ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶ
ನಮಗೂ ಪ್ರತೀ ಜೀವವೂ ಅಮೂಲ್ಯವೇ. ನಮಗೂ ಕುಟುಂಬವಿದೆ. ಇಂತಹ ಸಂದರ್ಭದಲ್ಲಿ ಆರೋಪ ಮಾಡುವುದು ಸರಿಯಲ್ಲ. ಘಟನೆಯ ರಾತ್ರಿ 40 ಸಿಲಿಂಡರ್ ಆಕ್ಸಿಜನ್ ಕಳುಹಿಸಲಾಗಿದೆ. ಒಟ್ಟಾಗಿ 250 ಸಿಲಿಂಡರ್ ಕಳುಹಿಸಲಾಗಿದೆ. ಆಕ್ಸಿಜನ್ ಸರಬರಾಜು ಏಜೆನ್ಸಿ ಅವರು ಕೆಲಸ ಮಾಡುತ್ತಾರೆ. ಈ ಸಮಯದಲ್ಲಿ ಆಕ್ಸಿಜನ್ ಹೆಚ್ಚಾಗಿ ಬೇಕು. ಮೈಸೂರಿನಲ್ಲಿ ಆಕ್ಸಿಜನ್ ಕೊರತೆಯಾಗಿದ್ದು, ಅದನ್ನೇ ಸರಿದೂಗಿಸಲು ಪ್ರತಿದಿನ ಎಲ್ಲಾ ಅಧಿಕಾರಿಗಳು ಕಾರ್ಯನಿರತರಾಗಿದ್ದಾರೆ ಎಂದರು. ನನಗೆ ಈ ಘಟನೆಯಿಂದ ಬಹಳ ನೋವಾಗಿದೆ ಎಂದು ಜಿಲ್ಲಾಧಿಕಾರಿ ಭಾವುಕರಾದರು.