ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ 2021-22 ಸಾಲಿನಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಅರ್ಹ ರೈತ ಫಲಾನುಭವಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ವಾರ್ಷಿಕ ಬೆಳೆ ಸಾಲ ನಿಗದಿ ಮಾಡುವ ಸಂಬಂಧ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು.
ಈ ವೇಳೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಪ್ರಸಕ್ತ ಸಾಲಿನಲ್ಲಿ ರೈತರಿಗೆ ನೀಡಬಹುದಾದ ಬೆಳೆ ಸಾಲ ಕುರಿತಂತೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯು ಶಿಫಾರಸು ಮಾಡಿದ್ದ ಅಂದಾಜು ವೆಚ್ಚವನ್ನು ಪರಿಶೀಲಿಸಿ ವಿವಿಧ ಬೆಳೆಗಳನ್ನು ಬೆಳೆಯಲು ತಗಲುಬಹುದಾದ ವೆಚ್ಚವನ್ನು ನಿಗದಿ ಮಾಡಿದರು.
ಎರಡು ಜಿಲ್ಲೆಯ ರೈತರು ಹೆಚ್ಚು ಬೆಳೆಯುವ ಬೆಳೆಗಳಾದ ಭತ್ತ, ರಾಗಿ, ಮುಸುಕಿನ ಜೋಳ, ಸೂರ್ಯಕಾಂತಿ, ಬಾಳೆ, ಅರಿಶಿಣ, ಶುಂಠಿ, ಮೆಣಸಿನಕಾಯಿ, ಟೊಮೆಟೊ, ಮಾವು, ಸಪೋಟ, ಕ್ಯಾರೆಟ್, ಉದ್ದು, ಬಟಾಣಿ ಸೇರಿದಂತೆ ಮುಂತಾದ ಬೆಳೆಗಳಿಗೆ ಎಕರೆವಾರು ತಗುಲುವ ವೆಚ್ಚವನ್ನು ರೈತರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಬಳಿಕ ಮಾತನಾಡಿದ ಅವರು, ಕಳೆದ ಬಾರಿ ನೀಡಿದ್ದ ಸಾಲಕ್ಕಿಂತ ಈ ಬಾರಿ ಕಡ್ಡಾಯವಾಗಿ ಶೇ.10 ರಷ್ಟು ಹಾಗೂ ಅದಕ್ಕಿಂತ ಹೆಚ್ಚು ಸೇರಿಸಲಾಗಿದೆ. ಅರ್ಹ ರೈತ ಫಲಾನುಭವಿಗಳಿಗೆ ಸಾಲವು ಅನುಕೂಲವಾಗುವಂತೆ ಅಧಿಕಾರಿಗಳು ಕ್ರಮವಹಿಸಬೇಕು. ಸಣ್ಣ ಹಾಗೂ ಅತೀ ಸಣ್ಣ ರೈತರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.