ಮೈಸೂರು : ಅನ್ಲಾಕ್ 0.5 ಪ್ರಕಾರ ಲಾಕ್ಡೌನ್ ಅನ್ನು ಒಂದು ಪ್ರದೇಶಕ್ಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಜನರು ಕೋವಿಡ್ ನಿಯಮಗಳನ್ನು ಪಾಲಿಸುವುದು ಮುಖ್ಯ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೈಸೂರಿನಲ್ಲಿ ಕೋವಿಡ್ ಟೆಸ್ಟ್ ಹೆಚ್ಚು-ಹೆಚ್ಚು ಮಾಡಲಾಗುತ್ತಿದೆ. ಬೆಂಗಳೂರು ನಂತರ ಕೋವಿಡ್ ಸಾವಿನ ಪ್ರಮಾಣ ಮೈಸೂರಿನಲ್ಲಿ ಜಾಸ್ತಿ ಇದ್ದು, ಡೆತ್‌ರೇಟ್ ಅನ್ನು ಕಡಿಮೆ ಮಾಡಲು ಕ್ರಮ ಕೈಗೊಂಡಿದ್ದೇವೆ. ಪ್ರತಿ ತಾಲೂಕಿನಲ್ಲೂ ಆ್ಯಕ್ಸಿಜನ್ ಬೆಡ್ ರೆಡಿ ಮಾಡಿದ್ದೇವೆ. ಎಲ್ಲಾ ಖಾಸಗಿ ಆಸ್ಪತ್ರೆಗಲ್ಲೂ ಶೇ.50ರಷ್ಟು ಬೆಡ್ಗಳನ್ನು ನೀಡಬೇಕೆಂದು ಸೂಚಿಸಿದ್ದೇವೆ.
ಇದರ ಉಸ್ತುವಾರಿವಾಗಿ ನಾಲ್ವರು ನೋಡೆಲ್ ಆಫೀಸರ್ಸ್ ನೇಮಕ ಮಾಡಿ ಟೆಸ್ಟ್ ಮಾಡುತ್ತಿದ್ದೇವೆ. ನಾವೆಲ್ಲರೂ ಲಸಿಕೆ ಬರುವವರೆಗೂ ಎಚ್ಚರಿಕೆಯಿಂದ ಇರಬೇಕು. ಆದರೆ, ಮೈಸೂರು ಜಿಲ್ಲೆಯಲ್ಲಿ ಜನರಲ್ಲಿ ಮಾಸ್ಕ್ ಹಾಕದೆ ನಿರ್ಲಕ್ಷ್ಯ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಆದ್ದರಿಂದ ಜನರು ಕೋವಿಡ್ ನಿಯಮ ಪಾಲಿಸಬೇಕು ಎಂದು ಜನರಲ್ಲಿ ಮನವಿ ಮಾಡುತ್ತೇನೆ. ನಮ್ಮಲ್ಲಿ ಬೆಡ್ಗಳ ಕೊರತೆ ಇಲ್ಲ, ಈಗ ಆ್ಯಕ್ಸಿಜನ್ ಕೊರತೆಯೂ ಇಲ್ಲ ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ರು.
ತಾಲೂಕು ಕೇಂದ್ರಗಳಲ್ಲಿ ಆ್ಯಕ್ಸಿಜನ್ ಬೆಡ್, ಐಸಿಯು ಕೊರತೆ ಇಲ್ಲ. ಪ್ರವಾಸಿ ತಾಣಗಳಲ್ಲಿ ಅನ್ಲಾಕ್ 0.5 ಗೈಡ್ಲೈನ್ಸ್ ಪ್ರಕಾರ ಒಂದು ಪ್ರದೇಶಕ್ಕೆ ಲಾಕ್ಡೌನ್ ಮಾಡಲು ಸಾಧ್ಯವಿಲ್ಲ. ಕೋವಿಡ್ ನಿಯಂತ್ರಣಕ್ಕೆ ಅರಮನೆಯಲ್ಲಿ ಕೋವಿಡ್ ಟೆಸ್ಟ್ ಮಾಡುತ್ತಿದ್ದು, ಟೆಸ್ಟ್ ಸಂದರ್ಭದಲ್ಲಿ 10 ಜನರಿಗೆ ಪಾಸಿಟಿವ್ ಬಂದಿದೆ ಎಂದು ಇದೇ ಸಂದರ್ಭದಲ್ಲಿ ಡಿಸಿ ರೋಹಿಣಿ ಸಿಂಧೂರಿ ತಿಳಿಸಿದರು.