ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಮತದಾನ ಪ್ರಕ್ರಿಯೆಯ ಭಾಗವಾದ ವಿವಿ ಪ್ಯಾಟ್ ಮಷಿನ್ಗಳು ಫೆಬ್ರವರಿ 13ರಂದು ಜಿಲ್ಲೆಗೆ ಆಗಮಿಸಲಿವೆ ಎಂದು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ತಿಳಿಸಿದರು. ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, "ಅಂದು ಹೈದರಾಬಾದ್ನಿಂದ 9 ಲಾರಿಗಳಲ್ಲಿ ವಿವಿ ಪ್ಯಾಟ್ ಮಷಿನ್ಗಳನ್ನು ಜಿಲ್ಲೆಗೆ ತರಲಾಗುವುದು. ಎಲ್ಲಾ ಪಕ್ಷಗಳ ಪ್ರತಿನಿಧಿಗಳು ವಿವಿ ಪ್ಯಾಟ್ಗಳನ್ನು ಪರಿಶೀಲಿಸಬಹುದಾಗಿದೆ ಹಾಗೂ ತಮಗೆ ಯಾವುದೇ ಸಂದೇಹಗಳಿದ್ದಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ" ಎಂದರು.
"ವಿವಿ ಪಾಟ್ಗಳನ್ನು ಹೈದರಾಬಾದ್ನಿಂದ ನಮ್ಮ ಅಧಿಕಾರಿಗಳು ಸ್ವೀಕರಿಸಿದ ಕ್ಷಣದಿಂದ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಪ್ರತಿ ಹಂತವನ್ನು ನೀವುಗಳು ನೋಡಬಹುದಾಗಿದೆ. ಅನಂತರ ಅಣಕು ಮತದಾನ ನಡೆಸಲಾಗುವುದು. ಒಟ್ಟಾರೆ ಯಾವುದೇ ಸಂದೇಹವಿಲ್ಲದಂತೆ ಚುನಾವಣೆ ನಡೆಸುವುದೇ ನಮ್ಮ ಉದ್ದೇಶ. ಜಿಲ್ಲೆಯಲ್ಲಿ 2,905 ಮತಗಟ್ಟೆಗಳಿದ್ದು, ಮತದಾರರ ಪಟ್ಟಿಗೆ ಹೆಸರು ಸೇರಿಸುವ ಹಾಗೂ ತೆಗೆಯುವ ಕಾರ್ಯಗಳಾಗುತ್ತಿದೆ. ಈ ವೇಳೆ ಯಾವುದೇ ಹಂತದಲ್ಲಿ ಬಿಎಲ್ಓಗಳು ಸ್ಪಂದಿಸದೇ ಇದ್ದಲ್ಲಿ ದೂರು ನೀಡಿ" ಎಂದು ಹೇಳಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇದ್ದರು.
ಇದನ್ನೂ ಓದಿ: ರಾಜಕೀಯ ಪ್ರಚಾರಕ್ಕೆ ಕಟ್ಟಿದ ಬಂಟಿಂಗ್ಸ್ಗೆ ಸಿಲುಕಿ ಪ್ರಾಣ ಕಳೆದುಕೊಂಡ ಕೋತಿ
ತಳಮಟ್ಟದಲ್ಲಿ ಮಾಹಿತಿ ಪಡೆದು ರೈತರ ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿ: "ರೈತ ಆತ್ಮಹತ್ಯೆ ಪ್ರಕರಣ ದಾಖಲಾದ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಎಫ್.ಐ.ಆರ್ ದಾಖಲು ಮಾಡುವಾಗ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪರಾಮರ್ಶಿಸಬೇಕು. ಸಹಾಯಕ ಕೃಷಿ ನಿರ್ದೇಶಕರು, ಸಹಾಯಕ ನಿಬಂಧಕರು ಮತ್ತು ಸಹಕಾರ ಇಲಾಖೆಯವರು ಜಂಟಿಯಾಗಿ ಸತ್ಯಾಂಶವನ್ನು ಅರಿಯಲು ತಳಮಟ್ಟದಲ್ಲಿ ಮಾಹಿತಿ ಪಡೆದು ರೈತರ ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಬೇಕು" ಎಂದು ತಿಳಿಸಿದರು.
ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತರ ಆತ್ಮಹತ್ಯೆ, ಹಾವು ಕಡಿತ ಹಾಗೂ ಇತರೆ ಆಕಸ್ಮಿಕ ಮರಣಗಳ ಜಿಲ್ಲಾ ಮಟ್ಟದ ಮೇಲ್ಮನವಿ ಪ್ರಾಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಮಾತನಾಡಿದರು. ಮೈಸೂರು ಜಿಲ್ಲೆಗೆ ಒಟ್ಟು 29 ರೈತ ಉತ್ಪಾದಕ ಸಂಸ್ಥೆಗಳ ಗುರಿಯನ್ನು ಸಾಧಿಸಲಾಗಿರುತ್ತದೆ. ಪ್ರಸ್ತುತ 2022-23ನೇ ಸಾಲಿಗೆ 12 ಹೊಸ ರೈತ ಉತ್ಪಾದಕ ಸಂಸ್ಥೆಗಳನ್ನು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಅನುಮೋದಿಸಿದರು. ಪ್ರಸ್ತುತ ಎಂಒಯು ಆಗಿ ಹೆಚ್ಚು ಸದಸ್ಯರನ್ನು ನೊಂದಾಯಿಸದೇ ಇರುವ ಸರ್ಕಾರೇತರ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಲ್ಲದೇ ಸಮಗ್ರ ಜಿಲ್ಲಾ ನೀರಾವರಿ ಸಮಿತಿ ಯೋಜನೆಯ ಪ್ರಕಾರ ತುಂತುರು ಹಾಗೂ ಹನಿ ನೀರಾವರಿ ಘಟಕಗಳಿಗೆ ಅನುಮೋದನೆ ನೀಡಿದರು. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ವಿಮಾ ಯೋಜನೆಯಡಿ 2020-21ನೇ ಸಾಲಿನಲ್ಲಿ 152 ಫಲಾನುಭವಿಗಳ ಖಾತೆಗೆ ಹಣ ಪಾವತಿಯಾಗದೇ ಬಾಕಿ ಉಳಿದಿದ್ದು ಸದರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 4 ಪ್ರಕರಣಗಳಿಗೆ ಹಣ ಪಾವತಿಸಲಾಗುತ್ತಿದೆ ಎಂದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಾಯತ್ರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ನಾಳೆ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ: ಚುನಾವಣಾ ಪ್ರಚಾರತಂತ್ರದ ಚರ್ಚೆ ಸಾಧ್ಯತೆ