ಮೈಸೂರು: ಇತ್ತೀಚೆಗೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವುದು ನಮಗೂ ಕೂಡ ಚಾಲೆಂಜಿಂಗ್ ಟೈಮ್ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಮೈಸೂರು ಜಿಲ್ಲೆಯಲ್ಲಿ ಪ್ರತಿದಿನವೂ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಈಗಾಗಲೇ 50 ಕ್ಕೂ ಹೆಚ್ಚು ಕಂಟೈನ್ಮೆಂಟ್ ಝೋನ್ ಗಳನ್ನು ಮಾಡಲಾಗಿದ್ದು, ಈ ಬಾರಿ ಕಂಟೈನ್ಮೆಂಟ್ ಝೋನ್ ಗಳು ಆಯಾ ಬೀದಿಗೆ ಮಾತ್ರ ಸೀಮಿತವಾಗಿರುತ್ತವೆ. ಅಪಾರ್ಟ್ಮೆಂಟ್, ಸ್ಲಂ ಏರಿಯಾಗಳಲ್ಲಿ ಬೇರೆ ರೀತಿಯ ಕಂಟೈನ್ಮೆಂಟ್ ಝೋನ್ಗಳನ್ನು ಮಾಡಲಾಗುತ್ತಿದ್ದು, ಜನರು ಕಡ್ಡಾಯವಾಗಿ ಮಾಸ್ಕ್ ಬಳಸಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಧಾರ್ಮಿಕ ಸಮಾರಂಭಗಳಿಂದ ದೂರ ಇರಬೇಕು. ಜೊತೆಗೆ ಜನರು ಜಾಗೃತರಾಗಬೇಕೆಂದು ಎಂದರು.
ಲಾಕ್ ಡೌನ್ ಸಡಿಲಿಕೆಯಿಂದ ಸೋಂಕು ಹೆಚ್ಚಾಗಿದ್ದು, ಅದರಲ್ಲಿ ಅಂತಾರಾಜ್ಯ ಹಾಗೂ ಅಂತರ್ ಜಿಲ್ಲೆಯಿಂದ ಪ್ರಯಾಣ ಮಾಡಿದವರಿಂದ ಸೋಂಕು ಹೆಚ್ಚಾಗುತ್ತಿದ್ದು, ಜನ ಭಯ ಪಡುವ ಅಗತ್ಯ ಇಲ್ಲ. ಆದರೆ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.
ಮೈಸೂರಿನಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆದ್ದರಿಂದ ಇಎಸ್ಐ ಆಸ್ಪತ್ರೆಯಲ್ಲಿ 100 ಹಾಸಿಗೆಯ ವಾರ್ಡ್ ಸಿದ್ಧ ಮಾಡಲಾಗುತ್ತಿದ್ದು, ಇದರ ಜೊತೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.
ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್ಗಳ ಕೊರತೆ ಇಲ್ಲ. ಆದರೆ ಸಿಬ್ಬಂದಿ ಕೊರತೆಯಾಗಬಹುದು. ಈ ಬಗ್ಗೆ ಈಗಾಗಲೇ ಗಮನ ಹರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.