ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2019ರ ದಸರಾ ಕವಿಗೋಷ್ಠಿ ಪೋಸ್ಟರ್ಅನ್ನು ವಸತಿ ಸಚಿವ ಹಾಗೂ ಮೈಸೂರು ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬಿಡುಗಡೆ ಮಾಡಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ದಸರಾ ಕವಿಗೋಷ್ಠಿ ಉಪ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಅಕ್ಟೋಬರ್ 2ರಿಂದ 6ರವರಗೆ ಐದು ದಿನಗಳ ಕಾಲ ಕವಿಗೋಷ್ಠಿಯು ಜಗನ್ಮೋಹನ ಅರಮನೆಯಲ್ಲಿ ನಡೆಯಲಿದೆ. ಸಾಮಾನ್ಯ ಜನರಿಗೆ ಕವನ ಮತ್ತು ಕವಿತೆಯ ಮೂಲಕ ಹಲವು ರೀತಿಯ ಮಾಹಿತಿ ತಲುಪಲಿದೆ. ಉತ್ತಮ ಕವಿಗಳನ್ನು ಆಹ್ವಾನಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಜಂಬೂ ಸವಾರಿಯ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯ ಮೇಲೆ ನಾಡದೇವತೆ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪಿಸಿ ಅಲಂಕಾರ ಮಾಡಲು ಸೀರೆ ಮತ್ತು ಅಲಂಕಾರ ವಸ್ತುಗಳನ್ನು ವಿವಿಧ ಸ್ಥರದ ವ್ಯಕ್ತಿಗಳು ನೀಡುತ್ತಿದ್ದರು. ಇದರಿಂದ ಹಲವು ಗೊಂದಲಗಳು ಏರ್ಪಟ್ಟ ಪರಿಣಾಮ ಆ ಸಂಪ್ರದಾಯಕ್ಕೆ ಅಂತ್ಯ ಹಾಡಿ ಇನ್ನು ಮುಂದೆ ಜಿಲ್ಲಾಡಳಿತದ ವತಿಯಿಂದಲೇ ದೇವಿಯ ಮೂರ್ತಿಗೆ ಸೀರೆ ಮತ್ತು ಅಲಂಕಾರ ಮಾಡಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ದಸರಾ ಕವಿಗೋಷ್ಠಿಯ ಕಾರ್ಯಾಧ್ಯಕ್ಷರಾದ ಡಾ. ಎನ್.ಕೆ.ಲೋಲಾಕ್ಷಿ ಮಾತನಾಡಿ, ಈ ಬಾರಿ ಕವಿಗೋಷ್ಠಿಯು ಪಂಚ ಕವಿಗೋಷ್ಠಿ ಎಂಬ ಹೆಸರಿನಲ್ಲಿ ನಡೆಯಲಿದೆ. ಕವಿಗೋಷ್ಠಿಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ಕವಿಗಳಾದ ಡಾ. ದೊಡ್ಡರಂಗೇಗೌಡ ಉದ್ಘಾಟಿಸುವರು. ಜೊತೆಗೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕನ್ನಡದ ಸಾರಸ್ವತ ಲೋಕದ ಖ್ಯಾತ ಕವಿಗಳ ಪ್ರಸಿದ್ಧ ಕವನಗಳ ಗೀತಗಾಯನವನ್ನು ಗಾಯಕ ಶ್ರೀಹರ್ಷ ಮತ್ತು ಉದಯೋನ್ಮುಖ ಗಾಯಕಿ ಕೀರ್ತನ ಹಾಗೂ ಸಂಗಡಿಗರು ಕಾವ್ಯಯಾನ ಎಂಬ ಹೆಸರಿನಲ್ಲಿ ನಡೆಸಿಕೊಡುವರು ಎಂದು ತಿಳಿಸಿದರು.
ಅಕ್ಟೋಬರ್ 2ರಂದು ಮೊದಲನೇಯದು ವಿಸ್ಮಿತ ಕವಿಗೋಷ್ಠಿಯಾಗಿದ್ದು, ಇದರಲ್ಲಿ 12 ಜನರಿಗೆ ಅವಕಾಶವಿದೆ. ವಿಭಿನ್ನ ವೃತ್ತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ವಿಜ್ಞಾನಿಗಳು, ಎಂಜಿನಿಯರ್, ಪೋಲಿಸ್, ಆಡಳಿತಾಧಿಕಾರಿಗಳು, ಪತ್ರಕರ್ತರು, ವಕೀಲರು, ನಟ-ನಟಿಯರು, ಐಟಿ-ಬಿಟಿ ಉದ್ಯೋಗಿಗಳು ಹೀಗೆ ವಿಭಿನ್ನ ವೃತ್ತಿಗಳ ಹವ್ಯಾಸಿ ಕವಿಗಳ ಪ್ರತಿಭಾ ಪ್ರದರ್ಶನವಾಗಲಿದೆ ಎಂದರು.
ಅಕ್ಟೋಬರ್ 3ರಂದು ಅಮ್ಮ ರಾಮಚಂದ್ರ ಮತ್ತು ಸಂಗಡಿಗರಿಂದ ಜಾನಪದ ಗಾಯನ ನಡೆಯಲಿದೆ. ಎರಡನೇಯ ವಿಕಾಸಗೋಷ್ಠಿಯಲ್ಲಿ ಮೈಸೂರು ಹಾಗೂ ಪ್ರಾದೇಶಿಕ ಜಿಲ್ಲೆಗಳಾದ ಹಾಸನ, ಮಂಡ್ಯ, ಮಡಿಕೇರಿ ಹಾಗೂ ಚಾಮರಾಜನಗರ ಜಿಲ್ಲೆಗಳ ಮಕ್ಕಳು, ಮಹಿಳೆಯರು, ಯುವಕ ಹಾಗೂ ಯುವತಿಯರು ಮತ್ತು ಹಿರಿಯ ಕವಿಗಳು ಸೇರಿದಂತೆ 24 ಜನ ಪಾಲ್ಗೊಳ್ಳುವರು.
ಅಕ್ಟೋಬರ್ 4ರಂದು ಕಾವ್ಯಗಳ ಮೂಲಕ ಹಾಸ್ಯವನ್ನು ಉಣಬಡಿಸುವಂತಹ ಹನಿಗವನಗಳು ಮತ್ತು ಚುಟುಕುಗಳ ಮೂಲಕ ಕಾವ್ಯ ರಸಾಯನ ಮತ್ತು ಗಾಯನವನ್ನು ದುಂಡಿರಾಜ್ ಮತ್ತು ಸಂಗಡಿಗರು ನಡೆಸಿಕೊಡುವರು. ಖ್ಯಾತ ಕವಿ ಹಾಗೂ ಸಾಹಿತಿಗಳಾದ ಪ್ರೊ. ಅ.ರಾ.ಮಿತ್ರ, ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಹಾಗೂ ಖ್ಯಾತ ಸಂಸ್ಕೃತಿ ಚಿಂತಕರಾದ ಡಾ. ಎಂ.ಮೋಹನ್ ಆಳ್ವ ಮತ್ತು ಚಿತ್ರ ನಟ ಮಂಡ್ಯ ರಮೇಶ್ ಅವರು ಈ ವಿನೋದ ಕವಿಗೋಷ್ಠಿಯಲ್ಲಿ ಭಾಗವಹಿಸುವರು ಎಂದರು.
ಅಕ್ಟೊಬರ್ 5ರಂದು ವಿಶಿಷ್ಟ ಕವಿಗೋಷ್ಠಿ ನಡೆಯಲ್ಲಿದ್ದು, ಇದು ಕಾವ್ಯ ಲೋಕದಿಂದ ವಂಚಿತರಾಗಿ ಮುಖ್ಯವಾಹಿನಿಗೆ ಬರದ ಸಾಮಾಜಿಕ ಮತ್ತು ಹವ್ಯಾಸಿ ಕವಿಗಳಿಗೆ ವಿಶೇಷ ವೇದಿಕೆಯಾಗಿದೆ. ನಿರ್ಗತಿಕರು, ಅನಾಥರು, ವಿಶೇಷಚೇತನರು, ಲಿಂಗ ಅಲ್ಪಸಂಖ್ಯಾತರು, ರೈತರು, ಆಟೋ ಚಾಲಕರು, ಪೌರ ಕಾರ್ಮಿಕರು, ವಿಚಾರಣಾಧೀನ ಕೈದಿಗಳು ಹಾಗೂ ಕೂಲಿ ಕಾರ್ಮಿಕರು ತಮ್ಮ ಕವಿ ಹೃದಯವನ್ನು ನಿರೂಪಿಸಲು ವೇದಿಕೆಯಾಗಿದೆ. ಇದಕ್ಕಾಗಿ ನಮ್ಮ ಉಪ ಸಮಿತಿಯು ಒಂದು ತಂಡವನ್ನು ಕಟ್ಟಿಕೊಂಡು ಇಂತಹವರನ್ನು ಗುರುತಿಸಿದೆ ಎಂದು ತಿಳಿಸಿದರು.
ಕೊನೆಯ ದಿನ ಅಕ್ಟೋಬರ್ 6ರಂದು ವಿಖ್ಯಾತ ಕವಿಗೋಷ್ಠಿ ನಡೆಯಲ್ಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಹಾಗೂ ಸಹವರ್ತಿ ಭಾಷೆಗಳಿಂದ ತಲಾ ಒಬ್ಬರಂತೆ ಒಟ್ಟು 37 ಕವಿಗಳು ಕಾವ್ಯ ವಾಚನ ಮಾಡುವರು ಎಂದರು.
ಕವಿಗೋಷ್ಠಿಗೆ ಉಜ್ಜೀವನ್ ಬ್ಯಾಂಕ್ನವರು ಪೋಸ್ಟರ್ಸ್, ಟೀಶಟ್೯, ಹೋಲ್ಡಿಂಗ್ಸ್ ಹಾಗೂ 4 ಸಾವಿರ ಶಲ್ಯ ಒದಗಿಸುವರು. ಎನ್ ರಿಚ್ ಕಂಪನಿಯವರು ವೇದಿಕೆಗೆ ಎಲ್.ಇ.ಡಿ ವಾಲ್ ಪ್ರಾಯೋಜನೆ ನೀಡುವರು ಹಾಗೂ ಇಸ್ಕಾನ್, ಯಶ್ ಡೆವೆಲಪಸ್೯, ವಿಘ್ನೇಶ್ವರ ಡೆವೆಲಪಸ್೯ ಹಾಗೂ ನಿರ್ಮಾಣ ಪ್ರಮೋಟಸ್೯ ಸಂಸ್ಥೆಯವರು 5 ದಿನಗಳು ಒಬ್ಬೊಬ್ಬರಂತೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಿದ್ದಾರೆ ಎಂದು ಕಾರ್ಯದರ್ಶಿ ಸಿ.ಆರ್. ಕೃಷ್ಣಕುಮಾರ್ ತಿಳಿಸಿದರು.