ಮೈಸೂರು: ಕಾಂಗ್ರೆಸ್ ಮತ್ತು ನನ್ನನು ಬಿಜೆಪಿ ಎದುರಿಸಲು ಮುಂದಾಗಿದೆ. ನಾನು ಯಾವುದಕ್ಕೂ ಹೆದರುವವನಲ್ಲ, ಯಾವುದೇ ತನಿಖೆ ಎದುರಿಸಲು ಸಿದ್ದ ಎಂದು ಮೈಸೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಇಂದು ಮೈಸೂರಿಗೆ ಆಗಮಿಸಿ ನಂಜನಗೂಡಿನ ಬದನವಾಳು ಖಾದಿ ಗ್ರಾಮಕ್ಕೆ ಅಕ್ಟೋಬರ್ 2 ರಂದು ರಾಹುಲ್ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ರಾಜ್ಯದಲ್ಲಿ ನಾನು ಇಂಧನ ಸಚಿವನಾಗಿದ್ದ ಅವಧಿಯ ದಾಖಲೆಗಳನ್ನು ಕೊಡಿ ಎಂದು ಇಂಧನ ಇಲಾಖೆಯ ಅಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ ಎಂದು ನನಗೆ ಕರೆ ಮಾಡುತ್ತಿದ್ದಾರೆ. ನಾನು ದಾಖಲೆ ಕೊಡಿ ಎಂದು ಅವರಿಗೆ ಹೇಳಿದ್ದೇನೆ. ನಾನು ತಪ್ಪು ಮಾಡಿದ್ದರೆ ನಾನೇ ಹಗ್ಗವನ್ನೂ ಸಹ ಕಳುಹಿಸುತ್ತೇನೆ ಎಂದರು.
ಈ ಮೂಲಕ ನನ್ನ ಮತ್ತು ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ಎದುರಿಸಲು ಮುಂದಾಗಿದೆ. ನಾವು ಯಾವುದೇ ತನಿಖೆಗೆ ಸಿದ್ದ, ಹೆದರುವ ಪ್ರಶ್ನೆಯೇ ಇಲ್ಲ ಎಂದು ಡಿ ಕೆ ಶಿವಕುಮಾರ್ ಸವಾಲು ಹಾಕಿದರು.
ಜೊತೆಗೆ ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಕಾಲಾವಧಿಯ ಕಾರ್ಯಕ್ರಮಗಳ ಸಮಗ್ರ ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಬೇಕಿದ್ದರೆ ಅವರು ಚಡ್ಡಿ, ಪ್ಯಾಂಟ್, ಹಾಸಿಗೆ, ಮೊಟ್ಟೆ ಎಲ್ಲವನ್ನು ತನಿಖೆ ಮಾಡಿಸಲಿ ಎಲ್ಲದಕ್ಕೂ ಸಿದ್ಧರಿದ್ದೇವೆ. ತನಿಖೆ ನಡೆಸಲು 3 ವರ್ಷ ಬೇಕಿತ್ತಾ. ನಾವು ಯಾವುದೇ ದಾಖಲೆಗಳನ್ನು ಮುಚ್ಚಿಟ್ಟಿಲ್ಲ ಬೇಕಿದ್ದರೆ ಬುಲ್ಡೋಜರ್ಸ್ ತರಿಸಲಿ, ಬೋರ್ ತೆಗೆಸಿ ನೆಲ ಅಗೆದು ಶೋಧ ಮಾಡಲಿ ನಮಗೇನೂ ಸಮಸ್ಯೆ ಇಲ್ಲ ಎಂದು ಡಿ ಕೆ ಶಿವಕುಮಾರ್ ಬಿಜೆಪಿಗೆ ಸವಾಲು ಹಾಕಿದ್ದಾರೆ.
ಮತಾಂತರ ನಿಷೇಧ ಕಾಯ್ದೆಯಿಂದ ಯಾವುದೇ ಪ್ರಯೋಜನವಿಲ್ಲ: ರಾಜ್ಯ ಸರ್ಕಾರ ಇಂದು ವಿಧಾನ ಪರಿಷತ್ತಿನಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆ ಮಾಡುತ್ತಿದೆ. ರಾಜ್ಯದಲ್ಲಿ ಎಲ್ಲಿ ಮತಾಂತರ ನಡೆಯುತ್ತಿದೆ ಹೇಳಿ, ಕೇವಲ ಪ್ರಚಾರಕ್ಕಾಗಿ ಈ ಕಾಯ್ದೆಯನ್ನು ಬಿಜೆಪಿ ಮಂಡನೆ ಮಾಡುತ್ತಿದೆ. ಇದರಿಂದ ಯಾರಿಗೂ ಪ್ರಯೋಜನವಿಲ್ಲ, ಅಲ್ಪ ಸಂಖ್ಯಾತರಿಗೆ ಭಯ ಹುಟ್ಟಿಸಲು ಕಾಯ್ದೆ ಮಂಡಿಸಲಾಗುತ್ತಿದೆ.
ಭಾವನಾತ್ಮಕ ವಿಚಾರವನ್ನು ಕೆರಳಿಸಲು ಈ ಕಾಯ್ದೆಯನ್ನು ಮಂಡನೆ ಮಾಡಲಾಗುತ್ತಿದೆ. ದೇಶ ಮತ್ತು ರಾಜ್ಯವನ್ನು ವಿಭಜನೆ ಮಾಡಲು ಬಿಜೆಪಿ ಮುಂದಾಗಿದೆ. ಜಾತಿ ಧರ್ಮವನ್ನು ಒಡೆಯುವ ಹುನ್ನಾರ ಇದಾಗಿದ್ದು, ಹಿಂದೂ ಧರ್ಮದ ಓಲೈಕೆ ಹಾಗೂ ಹೈಕಮಾಂಡ್ ಮೆಚ್ಚಿಸಲು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಬಳ್ಳಾರಿಯ ಸಮಾವೇಶ: ರಾಹುಲ್ ಗಾಂಧಿ ಅವರು 22 ದಿನಗಳ ಕಾಲ ಕರ್ನಾಟಕದಲ್ಲಿ ಭಾರತ್ ಜೋಡೋ ಪಾದಯಾತ್ರೆ ನಡೆಸಲಿದ್ದು, ಕೊನೆಗೆ ಬಳ್ಳಾರಿಯಲ್ಲಿ ದೊಡ್ಡ ಸಮಾವೇಶ ನಡೆಸಲಾಗುವುದು. ಪಾದಯಾತ್ರೆ ಸಂಬಂಧ ಬಿಜೆಪಿ ಟೀಕೆಯ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಯಾರು ಏನೇ ಹೇಳಿದರೂ ಕಾಂಗ್ರೆಸ್ ಭಾರತ್ ಜೋಡೋ ಪಾದಯಾತ್ರೆ ನಡೆಯುತ್ತದೆ. ಕಾಂಗ್ರೆಸ್ನ ಅಂತರಾಳದ ಬಗ್ಗೆ ಬಿಜೆಪಿ ಅವರಿಗೆ ಏನು ಗೊತ್ತು ಎಂದು ತಿರುಗೇಟು ನೀಡಿದರು.
ಆನ್ಲೈನ್ ನೋಂದಣಿ: ಭಾರತ್ ಜೋಡೋ ಪಾದಯಾತ್ರೆ ಸೆ.30ರಿಂದ ಕರ್ನಾಟಕದಲ್ಲಿ ಆರಂಭವಾಗಲಿದೆ. ದಸರಾ ವೇಳೆ 2 ದಿನ ವಿಶ್ರಾಂತಿ ನೀಡಲಾಗುವುದು. ರಾಜ್ಯದ ಯಾತ್ರೆಯಲ್ಲಿ ಆಸಕ್ತಿ ಇರುವವರಿಗೆ ನಡೆಯಲು ಅವಕಾಶ ಕಲ್ಪಿಸಿಕೊಡಲಿದ್ದೇವೆ. ಕೆಲವರು ಒಂದು ದಿನ ನಡೆದರೆ, ಮತ್ತೆ ಕೆಲವರು 21 ದಿನ ನಡೆಯಬಹುದು. ಹೀಗಾಗಿ ನಾವು ಪಕ್ಷಾತೀತವಾಗಿ ಎಲ್ಲರಿಗೂ ಮುಕ್ತ ಅವಕಾಶ ಮಾಡಿಕೊಡಲು ಆನ್ಲೈನ್ ನೋಂದಣಿ ಆರಂಭಿಸುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಎಲ್ಲ ವರ್ಗಗಳ ಜನರ ಮಧ್ಯೆ ಸಾಮರಸ್ಯ ಕಲ್ಪಿಸಿ, ನಮ್ಮ ನಾಡನ್ನು ಸರ್ವಜನಾಂಗದ ಶಾಂತಿ ತೋಟವಾಗಿ ಮಾಡಿ ದೇಶದಲ್ಲಿ ಶಾಂತಿ ಕಾಪಾಡುವುದು ನಮ್ಮ ಉದ್ದೇಶವಾಗಿದೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಿ ಯುವಕರಿಗೆ ಉದ್ಯೋಗ ಕಲ್ಪಿಸಲು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಆದಾಯ ಕುಸಿತದ ವಿರುದ್ಧ, ರಾಜ್ಯವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು, ಉತ್ತಮ ಆಡಳಿತಕ್ಕೆ, ದೇಶ ಹಾಗೂ ರಾಜ್ಯದ ರೈತರು, ಕಾರ್ಮಿಕರ ಬದುಕು ಸುಧಾರಿಸುವ ನಿಟ್ಟಿನಲ್ಲಿ ಈ ಯಾತ್ರೆ ಮಾಡುತ್ತಿದ್ದೇವೆ ಎಂದು ಡಿಕೆಶಿ ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಈ ಸಂದರ್ಭದಲ್ಲಿ ಇದ್ದರು.
ಇದನ್ನೂ ಓದಿ: 8ನೇ ದಿನಕ್ಕೆ ಕಾಲಿಟ್ಟ ಕಾಂಗ್ರೆಸ್ 'ಭಾರತ್ ಜೋಡೋ'... ರಾಹುಲ್ ಜೊತೆ ಅನೇಕರು ಸಾಥ್