ಮೈಸೂರು: ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದ ಎರಡನೇ ದಿನವಾದ ಭಾನುವಾರ ವಿದ್ವಾನ್ ಶಶಾಂಕ್ ಸುಬ್ರಹ್ಮಣ್ಯಂ ಮತ್ತು ತಂಡದವರ ಸುಶ್ರಾವ್ಯವಾದ ಕೊಳಲುವಾದನವು ಸಭಿಕರ ಮನಸೂರೆಗೊಂಡಿತು.
![Cultural event at the Mysore Palace premises](https://etvbharatimages.akamaized.net/etvbharat/prod-images/kn-mys-06-flute-palace-vis-ka10003_18102020215019_1810f_1603038019_406.jpg)
ಮೊದಲಿಗೆ ಆದಿತಾಳದ ರಾಗಹಂಸನಾದ ಮೂಲಕ ಕಾರ್ಯಕ್ರಮ ಪ್ರಾರಂಭಿಸಿದರು. ನಂತರ ರಾಗಗೌಡ ಮಲ್ಹಾರ್ ರಾಗದಲ್ಲಿ ಸಾರಸಮುಖಿ ಎಂಬ ಅಪರೂಪದ ಕೃತಿಯನ್ನು ಕೇಳುಗರ ಮನಗೆಲ್ಲುವಂತೆ ಪ್ರಸ್ತುತ ಪಡಿಸಿದರು.
![Cultural event at the Mysore Palace premises](https://etvbharatimages.akamaized.net/etvbharat/prod-images/kn-mys-06-flute-palace-vis-ka10003_18102020215019_1810f_1603038019_519.jpg)
ನಂತರ ಪೂರ್ವಿ ಕಲ್ಯಾಣಿ ರಾಗದಲ್ಲಿ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಮೀನಾಕ್ಷಿ ಮೇಮುದಂದೇಹಿ ಎಂಬ ವಿಶೇಷವಾದ ಕೃತಿಯನ್ನು ಸುಮಧುರವಾಗಿ ನುಡಿಸಿದರು. ಇದಲ್ಲದೆ ಕೆಲವು ಪ್ರಸಿದ್ಧ ದೇವರ ನಾಮಗಳನ್ನು ಪ್ರೇಕ್ಷಕರು ತಲೆದೂಗುವಂತೆ ನುಡಿಸಿದರು.
![Cultural event at the Mysore Palace premises](https://etvbharatimages.akamaized.net/etvbharat/prod-images/kn-mys-06-flute-palace-vis-ka10003_18102020215019_1810f_1603038019_270.jpg)
ಪಿಟೀಲಿನಲ್ಲಿ ವಿದ್ವಾನ್ ಎಚ್.ಎನ್. ಭಾಸ್ಕರ್, ಮೃದಂಗದಲ್ಲಿ ವಿದ್ವಾನ್ ಫಾರುಪಲ್ಲಿ ಫಲ್ಗುಣ್, ತಬಲವನ್ನು ರಾಜೇಂದ್ರ ನಾಕೋಡ್ ಅವರು ಸಾಥ್ ನೀಡಿದರು.