ಮೈಸೂರು: ಸ್ನೇಹಿತರೊಂದಿಗೆ ಜಗಳವಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ವಿಚಾರಣೆಗೆ ಕರೆದುಕೊಂಡು ಬಂದಿದ್ದ ಯುವಕ ವಿಚಾರಣೆಗೆ ಹೆದರಿ ಠಾಣೆಯಿಂದ ಪರಾರಿಯಾಗಿ, ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ನಂಜನಗೂಡು ತಾಲೂಕಿನ ನಗರ್ಲೆ ಗ್ರಾಮದ ಕಿರಣ್ (22) ಮೃತ ಯುವಕ.
ಏನಿದು ಘಟನೆ?: ಭಾನುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕಿರಣ್ ಹಾಗೂ ಆತನ ಸ್ನೇಹಿತರು ಯುವಕರೊಂದಿಗೆ ಸಣ್ಣಪುಟ್ಟ ಗಲಾಟೆ ಮಾಡಿಕೊಂಡಿದ್ದರು. ಬಳಿಕ ಮತ್ತೊಂದು ಗುಂಪಿನ ಯುವಕರಿಗೆ ಕಿರಣ್ ಹಾಗೂ ಆತನ ಸ್ನೇಹಿತರು ಹೊಡೆದಿದ್ದಾರೆ ಎಂದು ಯುವಕನೊಬ್ಬ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಈ ಸಂಬಂಧ ಪೊಲೀಸರು ಕಿರಣ್ ಹಾಗೂ ಆತನ ಸ್ನೇಹಿತರನ್ನು ಭಾನುವಾರ ಸಂಜೆ 6 ಗಂಟೆಗೆ ಠಾಣೆಗೆ ಕರೆಸಿದ್ದರು.
ಅಂದು ರಾತ್ರಿ 8.30ರ ಸುಮಾರಿಗೆ ಮೂತ್ರವಿಸರ್ಜನೆಗೆ ಎಂದು ಠಾಣೆಯಿಂದ ಹೊರಹೋಗಿದ್ದ ಕಿರಣ್ ಪರಾರಿಯಾಗಿದ್ದ. ಬಳಿಕ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ತಮ್ಮ ಸ್ವಗ್ರಾಮ ನಗರ್ಲೆಗೆ ಬಂದು ತಾನು ಪ್ರೀತಿಸುತ್ತಿದ್ದ ಹುಡುಗಿಯ ಮನೆ ಬಾಗಿಲು ಬಡಿದಿದ್ದ. ಅವರು ಬಾಗಿಲು ತೆರೆಯದಿದ್ದಾಗ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸೋಮವಾರ ಸಂಜೆ ಕಿರಣ್ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಕಲಬುರಗಿ: ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ನಲ್ಲೇ ರೈಲ್ವೆ ಸಿಬ್ಬಂದಿ ಆತ್ಮಹತ್ಯೆ
ಈ ಸಂಬಂಧ ನಂಜನಗೂಡು ಡಿವೈಎಸ್ಪಿ ಗೋವಿಂದರಾಜು ಮಾಹಿತಿ ನೀಡಿದ್ದು, ಭಾನುವಾರ ಕುಡಿದು ಸ್ನೇಹಿತರೊಂದಿಗೆ ಜಗಳ ಮಾಡಿಕೊಂಡಿದ್ದ ಕಾರಣಕ್ಕೆ ಯುವಕನನ್ನು ವಿಚಾರಣೆಗೆ ಎಂದು ಠಾಣೆಗೆ ಕರೆಸಿದ್ದೆವು. ಆದರೆ, ಆತ ಠಾಣೆಯಿಂದ ತಪ್ಪಿಸಿಕೊಂಡು ಹೋಗಿ ಪ್ರೇಯಸಿಯ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನೂ ಈ ಬಗ್ಗೆ ಕಿರಣ್ ಕುಟುಂಬಸ್ಥರು ಪೊಲೀಸರ ಮೇಲೆಯೇ ಆರೋಪಿಸಿದ್ದಾರೆ. ಬಿಳಿಗೆರೆ ಪೊಲೀಸರು ಠಾಣೆಗೆ ಕರೆಸಿ, ವಿಚಾರಣೆ ನೆಪದಲ್ಲಿ ಕಿರಣ್ಗೆ ಹೊಡೆದಿದ್ದಾರೆ. ಇದರಿಂದ ಹೆದರಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣವನ್ನು ಪೊಲೀಸರೇ ದಾರಿ ತಪ್ಪಿಸುತ್ತಿದ್ದು, ತಮ್ಮ ಕರ್ತವ್ಯ ಲೋಪ ಮರೆಮಾಚಲು ಇಲ್ಲಸಲ್ಲದ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಕಿರಣ್ ಸಂಬಂಧಿ ವಿಜಯ್ ಕುಮಾರ್ ಆರೋಪಿಸಿದ್ದಾರೆ.
ಸದ್ಯ ಕಿರಣ್ ಮರಣೋತ್ತರ ಪರೀಕ್ಷೆ ಕೆ.ಆರ್ ಆಸ್ಪತ್ರೆಯ ಶವಾಗಾರದಲ್ಲಿ ನಡೆದಿದೆ. ಕಿರಣ್ ಸಾವಿನಲ್ಲಿ ಪೊಲೀಸರ ಕರ್ತವ್ಯ ಲೋಪ ಇರುವ ಆರೋಪ ಬಂದಿರುವುದರಿಂದ ಇಲಾಖೆಯೇ ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬೆಂಗಳೂರು: ತಾಯಿಯನ್ನು ಕೊಲೆ ಮಾಡಿದ್ದಕ್ಕೆ ದ್ವೇಷ; ವ್ಯಕ್ತಿಯನ್ನು ಹತ್ಯೆಗೈದು ಯುವಕ ಪರಾರಿ