ಮೈಸೂರು : ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರನ್ನು ಗಾಂಜಾ ಸಮೇತ ಬೈಲುಕುಪ್ಪೆ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳಿಂದ 30 ಕೆಜಿ ಮಾದಕವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಟ್ಕರ್ ಮಾಹಿತಿ ನೀಡಿದರು.
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪ ಪೊಲೀಸ್ ವಸತಿ ಗೃಹದ ಆವರಣದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, "ಬೈಲುಕುಪ್ಪೆಯ ಟಿಬೆಟಿಯನ್ 1ನೇ ಕ್ಯಾಂಪಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಇಲ್ಲಿನ ಪೊಲೀಸರು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಟ್ಕರ್, ಹುಣಸೂರು ಡಿವೈಎಸ್ಪಿ ಪಿ ಕೆ ಮಹೇಶ್ ಹಾಗೂ ಸಿಪಿಐ ಪ್ರಕಾಶ್ ನೇತೃತ್ವದಲ್ಲಿ ಮಂಗಳವಾರ ಮುಂಜಾನೆ ದಾಳಿ ನಡೆಸಿ 30 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ತಾಲೂಕಿನ ಕೆಲ ಭಾಗಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಕಾಲೇಜು ಆವರಣಗಳಲ್ಲಿ ಮಾದಕ ವಸ್ತುಗಳ ಮಾರಾಟ ಕುರಿತು ಅಭಿಯಾನ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : ಗಾಂಜಾ ಲೇಪಿತ ಚಾಕೊಲೇಟ್ ಮಾರಾಟ : ಇಬ್ಬರು ಆರೋಪಿಗಳ ಬಂಧನ
ಪ್ರಮುಖ ಆರೋಪಿ ಒಡಿಶಾ ಮೂಲದವನು : ಒಡಿಶಾ ರಾಜ್ಯದವನಾದ ವಿಕ್ರಂ ನಾಯಕ್ (25) ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಬಂದು ನೆಲೆಸಿ ಅಲ್ಲಿನ ಟೌನ್ ನಿವಾಸಿ ನಯನ್ ದೀಪ್ (28) ಸಂಪರ್ಕ ಪಡೆದು ಗಾಂಜಾವನ್ನು ಶೇಖರಿಸಿಟ್ಟಿದ್ದನು. ಇವರೊಂದಿಗೆ ಪಿರಿಯಾಪಟ್ಟಣ ತಾಲೂಕಿನ ಗುಡ್ಡೇನಹಳ್ಳಿ ಗ್ರಾಮದ ಭರತ್ ಕುಮಾರ್ ಅಲಿಯಾಸ್ ಮಂಜು (30), ಕೊಡಗು ಜಿಲ್ಲೆ ಮಡಿಕೇರಿ ಟೌನ್ ಜಂಶಿರ್ (26), ಪಿರಿಯಾಪಟ್ಟಣ ತಾಲೂಕಿನ ಆಲನಹಳ್ಳಿ ಗ್ರಾಮದ ಅನಿಲ್ ಕುಮಾರ್ (24) ಎಂಬುವರನ್ನು ಬಂಧಿಸಲಾಗಿದೆ. ಬಂಧಿತ ಐವರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ನಂತರ ಜೈಲಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ : ಬಾಂಗ್ ಚಾಕೊಲೇಟ್ನಲ್ಲಿ ಗಾಂಜಾ ಅಂಶ ಪತ್ತೆ : ಇಬ್ಬರು ಆರೋಪಿಗಳ ಬಂಧನ
ಚಾಕೋಲೆಟ್ನಲ್ಲಿ ಗಾಂಜಾ : ಇನ್ನು, ಇತ್ತೀಚಿಗೆ ಮಂಗಳೂರು ನಗರದ ಎರಡು ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ ಬಾಂಗ್ ಚಾಕೋಲೆಟ್ನಲ್ಲಿ ಗಾಂಜಾ ಅಂಶ ಇರುವುದು ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಮನೋಹರ್ ಶೇಟ್ ಮತ್ತು ಬೆಚನ್ ಸೋನ್ನರ್ ಬಂಧಿತ ಆರೋಪಿಗಳು. ಬಂಧಿತರಿಂದ 48 ಸಾವಿರ ರೂ. ಮೌಲ್ಯದ ತಲಾ 40 ಬಾಂಗ್ ಚಾಲೋಲೆಟ್ ತುಂಬಿರುವ 300 ಪ್ಯಾಕೆಟ್ಗಳನ್ನು ಮತ್ತು 592 ಬಿಡಿ ಚಾಕೋಲೆಟ್ಗಳನ್ನು (ಒಟ್ಟು 12,592 ಬಾಂಗ್ ಚಾಕೋಲೆಟ್ಗಳನ್ನು) ಪೊಲೀಸರು ವಶಪಡಿಸಿಕೊಂಡಿದ್ದರು. ವಶಪಡಿಸಿಕೊಂಡ ಬಾಂಗ್ ಚಾಕೋಲೆಟ್ಗಳಲ್ಲಿ ಮಾದಕ ಅಂಶ ಇರುವುದನ್ನು ಕಂಡುಹಿಡಯಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಬಳಿಕ, ಆ ಚಾಕೋಲೆಟ್ಗಳಲ್ಲಿ ಗಾಂಜಾ ಅಂಶ ಇರುವುದು ವಿಧಿ ವಿಜ್ಞಾನ ಪ್ರಯೋಗಾಲಯದಿಂದ ತಿಳಿದು ಬಂದಿತ್ತು.
ಇದನ್ನೂ ಓದಿ : ರಾಯಚೂರಿನಲ್ಲಿ ಗಾಂಜಾ ಚಾಕೊಲೇಟ್ ಪತ್ತೆ : ಬಂಧಿತರ ಸಂಖ್ಯೆ 5ಕ್ಕೆ ಏರಿಕೆ