ಮೈಸೂರು: ದಕ್ಷಿಣ ಕಾಶಿ ಎಂದೇ ಖ್ಯಾತಿ ಗಳಿಸಿರುವ ನಂಜನಗೂಡು ತಾಲೂಕಿನ ನಂಜುಂಡೇಶ್ವರ ದೇವಸ್ಥಾನದ ರಾಜಗೋಪುರದ ವಿಗ್ರಹಗಳು ಬಿರುಕುಗೊಂಡು ಬೀಳತೊಡಗಿವೆ.
ಕೆಲವೇ ದಿನಗಳಲ್ಲಿ ನಂಜುಂಡೇಶ್ವರ ದೇವಸ್ಥಾನದಲ್ಲಿ ಪಂಚ ಮಹಾರಥೋತ್ಸವ ನಡೆಯಲಿದ್ದು, ಮಹಾರಥೋತ್ಸವಕ್ಕೆ ಸಿದ್ಧತೆ ನಡೆಸುತ್ತಿರುವ ತಾಲೂಕು ಆಡಳಿತಾಧಿಕಾರಿಗಳು ರಾಜಗೋಪುರದ ವಿಗ್ರಹದ ದುರಸ್ತಿ ಬಗ್ಗೆ ಕಾಳಜಿ ವಹಿಸದೇ ಇರುವುದು ಭಕ್ತರ ಬೇಸರಕ್ಕೆ ಕಾರಣವಾಗಿದೆ.
ರಾಜಗೋಪುರದ ಮೇಲೆ ಅಳವಡಿಸಿರುವ ವಿಗ್ರಹಗಳು ಬಣ್ಣ ಕಳೆದುಕೊಂಡು ಕಳೆಗುಂದುತ್ತಿರುವುದರ ಜೊತೆಗೆ ವಿಗ್ರಹಗಳಲ್ಲಿ ಕೈ-ಕಾಲು ಮುರಿದು ಬೀಳುತ್ತಿವೆ. ವಿಗ್ರಹಗಳನ್ನು ದುರಸ್ತಿ ಮಾಡುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.