ಮೈಸೂರು: ಮೈಸೂರಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದ್ದು ಇನ್ನು ಹೆಚ್ಚು ಹೆಚ್ಚು ಕೋವಿಡ್ ಟೆಸ್ಟ್ ಗಳನ್ನು ಮಾಡಲಾಗುವುದು ಎಂದು ಡಾ. ಚಿದಂಬರಂ ಈಟಿವಿ ಭಾರತ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕೋವಿಡ್ ಟೆಸ್ಟ್ ಮುಖ್ಯಸ್ಥರಾದ ಡಾ.ಚಿದಂಬರಂ ಮಾತನಾಡಿ, ಲಾಕ್ ಡೌನ್ ಸಂದರ್ಭದಲ್ಲಿ ಜನರಲ್ಲಿ ಕೋವಿಡ್ ಬಗ್ಗೆ ಭಯ ಮತ್ತು ಎಚ್ಚರಿಕೆ ಇತ್ತು. ಈಗ ಅದು ಕಂಡುಬರುತ್ತಿಲ್ಲ, ಜನರು ದೇಶದ ಪ್ರಜೆಯಾಗಿ ಹಾಗೂ ಮನುಷ್ಯನಾಗಿ ಏನು ಮಾಡಬೇಕು ಎಂಬುದನ್ನು ತಿಳಿದರೆ ಸೋಂಕಿನಿಂದ ದೂರವಿರಬಹುದು ಎಂದರು.
ಕೋವಿಡ್ ತಡೆಯಲು ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ ಹೆಚ್ಚು ಕೋವಿಡ್ ಟೆಸ್ಟ್ ಗಳನ್ನು ಮಾಡುತ್ತಿದ್ದು , ಈಗಾಗಲೇ ಟೆಸ್ಟ್ ಗಳು ಒಂದು ಲಕ್ಷಕ್ಕೂ ಹೆಚ್ಚು ದಾಟಿದ್ದು, ಪ್ರತಿದಿನವೂ ಒಂದೊಂದು ಕೇಂದ್ರಗಳಲ್ಲಿ 200 ರಿಂದ 300 ಟೆಸ್ಟ್ಗಳನ್ನು ಮಾಡುತ್ತಿರುವುದಾಗಿ ತಿಳಿಸಿದರು.
ಯಾರಿಗಾದರೂ ರೋಗ ಲಕ್ಷಣಗಳು ಕಂಡು ಬಂದರೆ ಉಚಿತವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ, ಸರ್ಕಾರದ ಜೊತೆಗೆ ಇದನ್ನು ಹೋಗಲಾಡಿಸಲು ಸಹಕರಿಸಿ ಎಂದು ಇದೇ ಸಂದರ್ಭದಲ್ಲಿ ಡಾ.ಚಿದಂಬರಂ ಜನರಲ್ಲಿ ಮನವಿ ಮಾಡಿದ್ದು, ಟೆಸ್ಟ್ ಮತ್ತು ಪಾಸಿಟಿವ್ ವರದಿ ಬಗ್ಗೆ ಯೋಚನೆ ಮಾಡಬೇಡಿ ಧೈರ್ಯದಿಂದ ಪರೀಕ್ಷೆಯಲ್ಲಿ ಭಾಗವಹಿಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.