ಮೈಸೂರು: ಕೊರೊನಾ ಎರಡನೇ ಅಲೆ ಆತಂಕದಿಂದ ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯವು ಪ್ರವಾಸಿಗರಿಲ್ಲದೇ ಭಣಗುಡುತ್ತಿದ್ದು, ಇದು ಹೀಗೆ ಮುಂದುವರಿದರೆ ಪ್ರಾಣಿಗಳಿಗೆ ಆಹಾರ ಸಮಸ್ಯೆ ಎದುರಾಗಲಿದೆ ಎಂಬ ಆತಂಕ ಎದುರಾಗಿದೆ.
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಮೈಸೂರನತ್ತ ಪ್ರವಾಸಿಗರು ಆಗಮಿಸುತ್ತಿಲ್ಲ. ಇದರಿಂದಾಗಿ ಪ್ರವಾಸಿ ತಾಣಗಳಲ್ಲಿ ಪ್ರಮುಖ ಆಕರ್ಷಣೆ ಕೇಂದ್ರವಾದ ಶ್ರೀ ಚಾಮರಾಜೇಂದ್ರ ಮೃಗಾಲಯವು ಮೌನವಾಗಿದೆ. ಪ್ರಾಣಿ-ಪಕ್ಷಿಗಳ ಕೂಗ ಎಲ್ಲೆಡೆ ಮಾರ್ದನಿಸುತ್ತಿದೆ.
ಕೊರೊನಾ 2ನೇ ಅಲೆ ಆರಂಭಕ್ಕೂ ಮುನ್ನ ಮೃಗಾಲಯಕ್ಕೆ ನಿತ್ಯ 1500ಕ್ಕೂ ಹೆಚ್ಚು ಮಂದಿ ಆಗಮಿಸುತ್ತಿದ್ದರು. ಆದರೀಗ 10 ಜನ ಬರುವುದೇ ಹೆಚ್ಚಾಗಿದೆ. ಪ್ರವಾಸಿಗರು ಬಂದರೆ ಮೃಗಾಲಯ ನಡೆಸಲು ಆದಾಯ ಸಿಗಲಿದೆ. ಇಲ್ಲವಾದರೆ ಆದಾಯದ ಮೂಲವಿಲ್ಲದೇ ಪರದಾಡುವಂತಾಗುತ್ತದೆ. ಕಳೆದ ವರ್ಷ ಎರಡು ತಿಂಗಳು ಲಾಕ್ಡೌನ್ ಮಾಡಿದ ಹಿನ್ನೆಲೆ ಪ್ರಾಣಿಗಳಿಗೆ ಆಹಾರ ಒದಗಿಸಲು ಆರ್ಥಿಕ ಮುಗ್ಗಟ್ಟಿನಿಂದ ಮೃಗಾಲಯ ಬಳಲಿತ್ತು.
ಆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ ಸೋಮಶೇಖರ್ ದಾನಿಗಳ ಮೂಲಕ ನೆರವು ನೀಡಿದ್ದರು. ಆದರೆ, ಈ ವರ್ಷ ಲಾಕ್ಡೌನ್ ಆಗಿಲ್ಲ. ಅಲ್ಲದೆ ಪ್ರವಾಸಿಗರೂ ಬರುತ್ತಿಲ್ಲ. ಇದರಿಂದ ಮೃಗಾಲಯ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಓದಿ: ಕೊರೊನಾ ರಣಕೇಕೆ ನಡುವೆಯೂ ಅದ್ಧೂರಿ ಮದುವೆ... ವಧು-ವರನ ಕುಟುಂಬಗಳ ಮೇಲೆ ಬಿತ್ತು ಕೇಸ್!