ಮೈಸೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆರ್ಭಟ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಚಿಕಿತ್ಸೆಗಾಗಿ 4 ಆಸ್ಪತ್ರೆಗಳನ್ನು ಜಿಲ್ಲಾಡಳಿತ ಈಗಾಗಲೇ ಮೀಸಲಿಟ್ಟಿದೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಎಸ್ಐ, ನಂಜನಗೂಡಿನ ಹೊಸಕೋಟೆ ಬಳಿ ಇರುವ ಮೊರಾರ್ಜಿ ವಸತಿ ಶಾಲೆ, ವರಕೋಡು ಬಳಿ ಇರುವ ಆಸ್ಪತ್ರೆ, ಬಿಎಂ ಆಸ್ಪತ್ರೆ, ಕೆಎಸ್ಒಯುನಲ್ಲಿ ಅತಿಥಿ ಗೃಹಗಳನ್ನು ಆಸ್ಪತ್ರೆಗಳಾಗಿ ಪರಿವರ್ತಿಸುವ ಕೆಲಸ ನಡೆಯುತ್ತಿದೆ ಎಂದರು.
ಹಳೆಯ ಕೋವಿಡ್-19 ಆಸ್ಪತ್ರೆಯನ್ನು ಐಆರ್ಐ ಪ್ರಕರಣಗಳಿಗೆ ಮಾತ್ರ ಬಳಸಿಕೊಳ್ಳಲಾಗುವುದು ಎಂದರು. ಗ್ರಾಮಾಂತರ ಪ್ರದೇಶದಲ್ಲಿ ಹೋಮ್ ಕ್ವಾರಂಟೈನ್ ಮಾಡಲು ಆಗುವುದಿಲ್ಲ. ಅದಕ್ಕೆ ಪ್ರತ್ಯೇಕವಾದ ಕೊಠಡಿ, ಶೌಚಾಲಯ ಬೇಕು. ಗ್ರಾಮೀಣ ಭಾಗದಲ್ಲಿ ಅಂತಹ ವ್ಯವಸ್ಥೆ ಸಿಗುವುದು ಕಷ್ಟ. ಹಾಗಾಗಿ ಹೋಂ ಕ್ವಾರಂಟೈನ್ ಮಾಡದೆ ಆಸ್ಪತ್ರೆಗೆ ಸೇರಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 220 ಕಂಟೈನ್ಮೆಂಟ್ ಝೋನ್ಗಳಿವೆ. ಸಾರ್ವಜನಿಕರು ಆತಂಕ ಪಡುವುದಕ್ಕಿಂತ ಎಚ್ಚರಿಕೆ ವಹಿಸಬೇಕು. ಸಮುದಾಯದ ಮಟ್ಟದಲ್ಲಿ ಕೊರೊನಾ ಸೋಂಕು ಹರಡಿಲ್ಲ ಎಂದರು.