ಮೈಸೂರು: ಕೊರೊನಾದ ಹಿನ್ನೆಲೆಯಲ್ಲಿ 2021 ಫೆಬ್ರವರಿ 8 ರಿಂದ 13 ರ ವರೆಗೆ ನೆರವೇರಬೇಕಿದ್ದ ಸುತ್ತೂರು ಜಾತ್ರೆ ಈ ವರ್ಷ ರದ್ದು ಮಾಡಲಾಗಿದೆ ಎಂದು ಸುತ್ತೂರು ಶ್ರೀಗಳಾ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಕೊರೊನಾದಿಂದಾಗಿ ಎಲ್ಲ ಹಬ್ಬಗಳು ಸರಳವಾಗಿ ಆಚರಿಸುತ್ತಿದ್ದು, ಈಗಾಗಲೇ ಕೆಲವು ಜಾತ್ರೆ ರದ್ದಾಗಿ ಕೇವಲ ಪೂಜಾ ಕೈಂಕರ್ಯಗಳು ನಡೆದಿದ್ದವು. ಅದರಂತೆ ಸುತ್ತೂರು ಕ್ಷೇತ್ರದಲ್ಲಿ ಪುಷ್ಯ ಬಹುಳ ದ್ವಾದಶಯಿಂದ ಮಾಘ ಶುದ್ದ ತದಿಗೆ ಅಂದರೆ 2021 ಫೆಬ್ರವರಿ 8 ರಿಂದ 13 ರ ವರೆಗೆ ನೆರವೇರಬೇಕಿದ್ದ ಸುತ್ತೂರು ಜಾತ್ರೆ ರದ್ದಾಗಿದ್ದು, ಜಾತ್ರೆಯಲ್ಲಿ ನಡೆಯುತ್ತಿದ್ದ ರಥೋತ್ಸವ, ತೆಪ್ಪೋತ್ಸವ, ಕೊಂಡೋತ್ಸವ, ಇತರ ಉತ್ಸವಗಳು, ಜೊತೆಗೆ ಕೃಷಿ ಮೇಳ, ವಸ್ತು ಪ್ರದರ್ಶನ, ದೇಸಿ ಆಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಇತರ ಸ್ಪರ್ಧೆಗಳು, ನಾಟಕಗಳು ಯಾವುದೇ ಪ್ರದರ್ಶನ ಇರುವುದಿಲ್ಲ. ಬದಲಾಗಿ ಫೆಬ್ರವರಿ 9 ರಂದು ಸಂಜೆ ಮಠದಿಂದ ಉತ್ಸವ ಮೂರ್ತಿಯನ್ನು ಕರ್ತೃ ಗದ್ದುಗೆಗೆ ತಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹಾಗೂ ಸುತ್ತೂರಿನಲ್ಲಿರುವ ಎಲ್ಲ ಗ್ರಾಮ ದೇವತೆಗಳಿಗೂ ಪೂಜೆ ಸಲ್ಲಿಸಲಾಗುತ್ತದೆ. ಇದನ್ನು ಆನ್ಲೈನ್ ಮೂಲಕ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ತಿಳಿಸಿದ್ದಾರೆ.